ನುಡಿನಮನ: ಭ್ರಷ್ಟಾಚಾರಕ್ಕೆ ಸಿಂಹಸ್ವಪ್ನವಾಗಿದ್ದ ಖಡಕ್ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್
ನುಡಿನಮನ: ಭ್ರಷ್ಟಾಚಾರಕ್ಕೆ ಸಿಂಹಸ್ವಪ್ನವಾಗಿದ್ದ ಖಡಕ್ ನ್ಯಾಯಮೂರ್ತಿ ಶೈಲೇಂದ್ರ ಕುಮಾರ್
ಖಡಕ್ ನ್ಯಾಯಮೂರ್ತಿ ಎಂದೇ ಹೆಸರಾಗಿದ್ದ ನ್ಯಾ. ಡಿ.ವಿ.ಶೈಲೇಂದ್ರ ಕುಮಾರ್ ನಮ್ಮನ್ನಗಲಿದ್ದಾರೆ. ಆದರೆ, ಅವರು ಇಟ್ಟ ಹೆಜ್ಜೆಗಳ ನೆನಪು ಆದರ್ಶದ ಹಾದಿಯನ್ನು ಮೆಲುಕು ಹಾಕುವ ಪ್ರಯತ್ನ ಇಲ್ಲಿದೆ..
ಭ್ರಷ್ಟಾಚಾರದ ವಿರುದ್ಧ ಗಟ್ಟಿ ಧ್ವನಿ ಎತ್ತಿದ ಶೈಲೇಂದ್ರ ಕುಮಾರ್ ನ್ಯಾಯಾಂಗದಲ್ಲಿ ಈ ವಿಚಾರವಾಗಿ ಮೇಲ್ಪಂಕ್ತಿ ಹಾಕಿಕೊಟ್ಟವರು. ಕರ್ನಾಟಕ ಹೈಕೋರ್ಟ್‌ನ ಅಂದಿನ ಮುಖ್ಯ ನ್ಯಾಯಮೂರ್ತಿ ಪಿ.ಡಿ. ದಿನಕರನ್ ವಿರುದ್ಧ ಅಕ್ರಮ ಭೂಕಬಳಿಕೆ ಆರೋಪ ಬಂದಾಗ ಬಂಡಾಯದ ಬಾವುಟ ಹಾರಿಸಿ ನ್ಯಾಯಾಂಗದಲ್ಲಿ ಮಿಂಚಿನ ಸಂಚಲನ ಉಂಟು ಮಾಡಿದ್ದರು.
ಈ ವಿಚಾರಕ್ಕೆ ಪೂರ್ಣ ನ್ಯಾಯಾಲಯ ಸಭೆಯನ್ನು ಆಗ್ರಹಿಸಿದ್ದರು. ಇದಕ್ಕೆ ನ್ಯಾಯಮೂರ್ತಿಗಳು ಬೆಂಬಲ ನೀಡದಿದ್ದಾಗಿ ತಾವೇ ರೂಪಿಸಿದ್ದ ಅಂತರ್ಜಾಲ ವೆಬ್‌ಸೈಟ್‌ನಲ್ಲಿ ಈ ಮಾಹಿತಿಯನ್ನು ಪ್ರಕಟಿಸುವ ಧೈರ್ಯ ತೋರಿದ್ದರು.
ಮೊದಲ ಬಾರಿಗೆ ನ್ಯಾಯಮೂರ್ತಿಗಳೂ ಆಸ್ತಿ ವಿವರ ಬಹಿರಂಗ ಪಡಿಸಬೇಕು ಎಂಬ ಪರಿಕಲ್ಪನೆಯನ್ನು ತಂದಿದ್ದರು. ಇದನ್ನು ಹೈಕೋರ್ಟ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಬೇಕು ಎಂಬುದು ಅವರ ಇರಾದೆ ಆಗಿತ್ತು. ಆದರೆ, ಇದಕ್ಕೆ ರಿಜಿಸ್ಟ್ರಾರ್ ಜನರಲ್ ಅನುಮತಿಸಲು ನಿರಾಕರಿಸಿದ್ದರು.
ಆಗ ಶೈಲೇಂದ್ರ ಕುಮಾರ್ ತಾವೇ ಒಂದು ವೆಬ್‌ಸೈಟ್ ರೂಪಿಸಿ ಅದರಲ್ಲಿ ತಮ್ಮ ವೈಯಕ್ತಿಕ ಹಾಗೂ ಕುಟುಂಬದ ಆಸ್ತಿ ವಿವರ ಪ್ರಕಟಿಸಿದರು. ಈ ಮೂಲಕ ಇತರರಿಗೂ ಸಮಾಜಕ್ಕೂ ಮೇಲ್ಪಂಕ್ತಿ ಹಾಕಿಕೊಟ್ಟ ಧೀಮಂತ ವ್ಯಕ್ತಿತ್ವ ಇವರದ್ದು. ಇದು ರಾಷ್ಟ್ರಮಟ್ಟದಲ್ಲಿ ಭಾರೀ ಪ್ರಶಂಸೆಗೆ ಪಾತ್ರವಾಯಿತು. ಅಂದಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಸೇರಿ ಎಲ್ಲ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ಬಹಿರಂಗಪಡಿಸಲು ಇದು ಪ್ರೇರಣೆಯಾಗಿದ್ದಂತೂ ಸತ್ಯ.
ನ್ಯಾಯಮೂರ್ತಿ ಶೈಲೇಂದ್ರ ಕುಮಾರ್ ತಮ್ಮ ಜೀವನದಲ್ಲಿ ಯಾವುದೇ ರೀತಿಯ ಉಡುಗೊರೆ ಸ್ವೀಕರಿಸುತ್ತಿರಲಿಲ್ಲ. ಹೂಗುಚ್ಚ ನೀಡಿದರೂ ಅದನ್ನು ನಯವಾಗಿ ತಿರಸ್ಕರಿಸುತ್ತಿದ್ದರು.
ತಮ್ಮ ತೀರ್ಪುಗಳಲ್ಲೂ ಸಮಾನತೆ, ಭ್ರಷ್ಟ ವಿರೋಧಿ ನಿಲುವು ಶೈಲೇಂದ್ರ ಕುಮಾರ್ ಅವರದ್ದಾಗಿತ್ತು. ಬಾರ್‌ಗಳಲ್ಲಿ ಪುರುಷರಂತೆ ಮಹಿಳೆಯರೂ ದುಡಿಯಲು ಅರ್ಹರು ಎಂಬ ತೀರ್ಪು ಇವರ ನ್ಯಾಯಪೀಠದಿಂದ ಬಂತು.
ಸಮಾನತೆ ಮತ್ತು ಸಾಮಾಜಿಕ ಕಾಳಜಿಯ ಹಲವು ತೀರ್ಪುಗಳು ಇವರ ಲೇಖನಿಯಿಂದ ಹೊರಬಂದಿದ್ದು, ನ್ಯಾಯಾಂಗಕ್ಕೆ ಹೊಸ ಹೊಳಪು, ಪ್ರಭೆ ನೀಡಿದ್ದನ್ನು ಮರೆಯಲಾಗದು.