10 ನಿಮಿಷದಲ್ಲಿ ಆಸ್ತಿ ನೋಂದಣಿ: ಕಾವೇರಿ 2 ತಂತ್ರಾಂಶಕ್ಕೆ ಚಾಲನೆ
10 ನಿಮಿಷದಲ್ಲಿ ಆಸ್ತಿ ನೋಂದಣಿ: ಕಾವೇರಿ 2 ತಂತ್ರಾಂಶಕ್ಕೆ ಚಾಲನೆ
ಆಸ್ತಿಗಳ ನೋಂದಣಿ ಪ್ರಕ್ರಿಯೆ ಸರಳಗೊಳಿಸುವ ನಿಟ್ಟಿನಲ್ಲಿ ಕಾವೇರಿ 2ಗೆ ಚಾಲನೆ ನೀಡಲಾಗಿದೆ. ಇದರಿಂದ ಆಸ್ತಿಗಳ ನೋಂದಣಿ ಕೇವಲ 10 ನಿಮಿಷದಲ್ಲಿ ಮುಗಿದುಹೋಗಲಿದೆ.
ಕಲಬುರ್ಗಿ, ಚಿಂಚೋಳಿ ಮತ್ತು ಬೆಳಗಾವಿ ದಕ್ಷಿಣ ಉಪ ನೋಂದಾವಣೆ ಕಚೇರಿಯಲ್ಲಿ ಈ ಸೇವೆ ಈಗಾಗಲೇ ಚಾಲ್ತಿಯಲ್ಲಿದೆ. ದೇವನಹಳ್ಳಿ, ರಾಮನಗರ ಸೇರಿದಂತೆ ಇನ್ನೂ ಕೆಲವು ಕಚೇರಿಗಳಲ್ಲಿ ಕಾವೇರಿ 2 ತಂತ್ರಾಂಶವನ್ನು ಈ ತಿಂಗಳಿನಲ್ಲಿ ಅಳವಡಿಸುವ ಯೋಜನೆ ಇದೆ.
ವಕೀಲರು ತಮ್ಮ ಕಚೇರಿಯಲ್ಲೇ ಅಥವಾ ನಾಗರಿಕರು ತಮ್ಮ ಇದ್ದ ಸ್ಥಳದಲ್ಲೇ ಆಸ್ತಿ ನೋಂದಣಿಗೆ ಸಂಬಂಧಿಸಿದ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದು. ಶುಲ್ಕವನ್ನೂ ಲೆಕ್ಕ ಹಾಕಿಕೊಳ್ಳಬಹುದು. ತಂತ್ರಾಂಶವು ಪ್ರತಿ ಹಂತದಲ್ಲೂ ಮೊಬೈಲ್‌ಗೆ ಸಂದೇಶ ರವಾನಿಸುತ್ತದೆ.
ಉಪ ನೋಂದಾಣಾಧಿಕಾರಿಗಳು ಆನ್‌ಲೈನ್‌ನಲ್ಲೇ ದಾಖಲೆಗಳನ್ನು ಪರಿಶೀಲಿಸಿದ ನಂತರ ತಮಗೆ ಅನುಕೂಲವಾಗುವ ದಿನ ಮತ್ತು ಸಮಯವನ್ನು ಗ್ರಾಹಕರು ಆಯ್ಕೆ ಮಾಡಿಕೊಳ್ಳಬಹುದು. ಮೊಬೈಲ್‌ನಲ್ಲೇ ಚಲನ್ ಪಡೆದು ಹಣ ಪಾವತಿಸಬಹುದು. ಇದೆಲ್ಲ ಪ್ರಕ್ರಿಯೆ ಮುಗಿದ ನಂತರ, ಕಚೇರಿಗೆ ಭೇಟಿ ನೀಡಿದ 10 ನಿಮಿಷದೊಳಗೆ ಎಲ್ಲ ಪ್ರಕ್ರಿಯೆ ಮುಗಿದುಹೋಗಲಿದೆ.
ತಂತ್ರಾಂಶ ಅಳವಡಿಕೆ ಮತ್ತು ಕಾರ್ಯನಿರ್ವಹಣೆಯಲ್ಲಿ ನೋಂದಣಾದಿಕಾರಿಗಳ ಕಚೇರಿಯ ಪ್ರತಿ ಹಂತದ ಅಧಿಕಾರಿ, ಸಿಬ್ಬಂದಿಗೂ ಜವಾಬ್ದಾರಿ ನಿಗದಿ ಮಾಡಲಾಗಿದೆ. ತಪ್ಪಿತಸ್ಥರನ್ನು ಸುಲಭವಾಗಿ ಗುರುತಿಸಿ ಹೊಣೆಗಾರರನ್ನಾಗಿ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅಲ್ಲದೆ, ದತ್ತಾಂಶಗಳ ಸುರಕ್ಷತೆಗೂ ಒತ್ತು ನೀಡಲಾಗಿದೆ. ಈ ತಂತ್ರಾಂಶ ಬಳಕೆಯಿಂದ ಉಪ ನೋಂದನಾಧಿಕಾರಿಗಳ ಕಾರ್ಯವಿಧಾನದಲ್ಲಿ ಗಣನೀಯವಾದ ಪ್ರಗತಿ ಹಾಗೂ ಸರಳತೆ ಕಂಡುಬರಲಿದೆ ಎನ್ನಲಾಗಿದೆ.