ಮಾಲಕ - ಕಾರ್ಮಿಕನ ನಡುವೆ ವಿಚಾರಣೆ ಇತ್ಯರ್ಥವಾಗದೆ ಸೇವೆಯಿಂದ ವಜಾಗೊಳಿಸಲಾಗದು: ಹೈಕೋರ್ಟ್
ಮಾಲಕ - ಕಾರ್ಮಿಕನ ನಡುವೆ ವಿಚಾರಣೆ ಇತ್ಯರ್ಥವಾಗದೆ ಸೇವೆಯಿಂದ ವಜಾಗೊಳಿಸಲಾಗದು: ಹೈಕೋರ್ಟ್
ನೌಕರ (ಉದ್ಯೋಗಿ) ಮತ್ತು ಮಾಲಕನ (ಕಂಪನಿ/ಸಂಸ್ಥೆ) ನಡುವಿನ ವಿವಾದ ನ್ಯಾಯಾಧಿಕರಣದಲ್ಲಿ ವಿಚಾರಣೆ ಹಂತದಲ್ಲಿ ಇರುವಾಗ ಆ ಉದ್ಯೋಗಿಯನ್ನು ಆತನ ಕೆಲಸದಿಂದ ವಜಾಗೊಳಿಸುವುದಕ್ಕೆ ಅವಕಾಶವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ವಜಾಗೊಳಿಸಲಾಗಿರುವ ನೌಕರನಿಗೆ ವಾಪಸ್ ನೀಡಬೇಕು ಮತ್ತು ಆತನ ಬಾಕಿ ವೇತನ ನೀಡಬೇಕು ಎಂಬ ಕಾರ್ಮಿಕ ನ್ಯಾಯಾಲಯದ ಆದೇಶ ರದ್ದುಪಡಿಸಬೇಕು ಎಂದು ಕೋರಿ ಮಲ್ಬರಿ ಸಿಲ್ಕ್ಸ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ವಿವರ
ಬೆಂಗಳೂರು ಬೊಮ್ಮಸಂದ್ರದ ಬಟ್ಟೆ ತಯಾರಿಕಾ ಸಂಸ್ಥೆ 'ಮಲ್ಬರಿ ಸಿಲ್ಕ್ಸ್ ಇಂಟರ್ ನ್ಯಾಷನಲ್ ಲಿ.' ತನ್ನ ಉದ್ಯೋಗಿಗಳಾದ ಎನ್.ಜಿ. ಚೌಡಪ್ಪ ಹಾಗೂ ಇತರೆ ಮೂವರನ್ನು ಸೇವೆಯಲ್ಲಿ ದುಷ್ಕೃತ್ಯದ ಆರೋಪದಡಿ ವಜಾಗೊಳಿಸಿತ್ತು.
ತಮ್ಮನ್ನು ಉದ್ಯೋಗದಿಂದ ತೆಗೆದುಹಾಕಿರುವುದನ್ನು ಪ್ರಶ್ನಿಸಿ ಚೌಡಪ್ಪ ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಸದ್ರಿ ಈ ವ್ಯಾಜ್ಯದ ವಿಚಾರಣೆ ಬಾಕಿ ಇರುವಾಗಲೇ ಇತರೆ ಮೂವರು ನೌಕರರನ್ನು ಕೆಲಸಕ್ಕೆ ಮತ್ತೆ ಸೇರಿಸಿಕೊಂಡ ಸಂಸ್ಥೆ ಕೇಸು ದಾಖಲಿಸಿದ ಚೌಡಪ್ಪರನ್ನು ವಜಾಗೊಳಿಸಿತ್ತು.
ಮಾಲಕರ ಆದೇಶವನ್ನು ರದ್ದುಪಡಿಸಿದ್ದ ಲೇಬರ್ ಕೋರ್ಟ್, ವಜಾಗೊಂಡ ನೌಕರನನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳಬೇಕು ಮತ್ತು ಆ ನೌಕರನಿಗೆ ಹಿಂಬಾಕಿ ವೇತನ ಪಾವತಿಸುವಂತೆ ನಿರ್ದೇಶಿಸಿತ್ತು.
ನ್ಯಾಯಪೀಠ ಹೇಳಿದ್ದೇನು..?
ಈ ಆದೇಶ ಪ್ರಶ್ನಿಸಿದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ಚೌಡಪ್ಪರನ್ನು ಕೈಗಾರಿಕಾ ವಿವಾದಗಳ ಕಾಯ್ದೆ ಕಲಂ 33(2) ಬಿ ಅಡಿಯಲ್ಲಿ ವಜಾಗೊಳಿಸಲಾಗದು ಎಂದು ಹೇಳಿತು.
ಮತ್ತು ಲೇಬರ್ ಕೋರ್ಟ್ ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ಯಾವುದೇ ಸೂಕ್ತ ಕಾರಣಗಳಿಲ್ಲ ಎಂದು ಹೈಕೋರ್ಟ್ ಹೇಳಿ ಮಾಲಕರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.