ಅನುಕಂಪದ ನೇಮಕಾತಿ: ಅನಿಶ್ಚಿತತೆ, ವಿಳಂಬ ಧೋರಣೆ ಸಲ್ಲದು- ಸುಪ್ರೀಂ ಕೋರ್ಟ್
ಅನುಕಂಪದ ನೇಮಕಾತಿ: ಅನಿಶ್ಚಿತತೆ, ವಿಳಂಬ ಧೋರಣೆ ಸಲ್ಲದು- ಸುಪ್ರೀಂ ಕೋರ್ಟ್
ಅನುಕಂಪ ಆಧಾರಿತ ನೇಮಕಾತಿ ಮಾಡುವುದರ ಕುರಿತು ಅನಿಶ್ಚಿತತೆ ಅಥವಾ ವಿಳಂಬ ಧೋರಣೆ ಸಲ್ಲದು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಪಶ್ಚಿಮ ಬಂಗಾಳ ಸರ್ಕಾರ ಅನುಕಂಪದ ಆಧಾರಿತ ನೇಮಕಾತಿ ಕುರಿತು ಅನಿಶ್ಚಿತ ಮತ್ತು ವಿಳಂಬ ಧೋರಣೆಯನ್ನು ತಳೆದಿರುವ ಬಗ್ಗೆ ಸುಪ್ರೀಂ ಕೋರ್ಟ್ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.
ನ್ಯಾ. ಕೃಷ್ಣ ಮುರಾರಿ ಮತ್ತು ನ್ಯಾ. ಬಿ.ವಿ. ನಾಗರತ್ನ ಅವರನ್ನೊಳಗೊಂಡ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ವಿಳಂಬ ಮತ್ತು ಅನಿಶ್ಚಿತತೆಯಿಂದ ಇರುವ ಸ್ಥಿತಿಯಿಂದಾಗಿ ಕೆಲಸದ ನಿರೀಕ್ಷೆಯಲ್ಲಿ ತೊಳಲುತ್ತಿರುವ ಹಲವಾರು ಸರ್ಕಾರಿ ನೌಕರರ ಕುಟುಂಬಗಳಿಗೆ ಅನ್ಯಾಯ ಉಂಟಾಗಬಹುದು ಎಂದು ಪೀಠ ಹೇಳಿತು.
ಮೃತ ಸರ್ಕಾರಿ ನೌಕರರ ನೂರಾರು ಅವಲಂಬಿತರಿಗೆ ಅನುಕಂಪ ಆಧಾರಿತ ನೇಮಕಾತಿ ಮಾಡಿಕೊಳ್ಳುವ ಅರ್ಜಿಗಳಲ್ಲಿ ಪಶ್ಚಿಮ ಬಂಗಾಳ ಸರ್ಕಾರ ಅಧಿಕಾರಿಗಳು ವ್ಯವಹರಿಸಿದ ರೀತಿಗೆ ನ್ಯಾಯಪೀಠ ಆಕ್ಷೇಪ ವ್ಯಕ್ತಪಡಿಸಿತು.
ಅನುಕಂಪ ಆಧಾರಿತ ಅರ್ಜಿಗಳನ್ನು ಸ್ವಯಂಪ್ರೇರಿತರಾಗಿ ಹಾಗೂ ತ್ವರಿತ ಮನೋಭಾವದಿಂದ ನಿರ್ಧರಿಸಬೇಕು. ಇಂತಹ ಯೋಜನೆಗಳ ಒಟ್ಟಾರೆ ಆಶಯ ಈಡೇರಿಸಲು ಸರ್ಕಾರಿ ಅಧಿಕಾರಿಗಳು ಮನಸ್ಸು ಮಾಡಬೇಕು ಮತ್ತು ಸರ್ಕಾರದ ಕಡೆಯಿಂದ ಆಗುತ್ತಿರುವ ವಿಳಂಬ ತಡೆಯಬೇಕು. ಇದರಿಂದ ನೇಮಕಾತಿ ಯೋಜನೆಯ ಧ್ಯೇಯೋದ್ದೇಶಗಳು ಈಡೇರುವಂತೆ ನೋಡಿಕೊಳ್ಳಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.