ಸಾರ್ವಜನಿಕ ಮಾಹಿತಿ ಅಧಿಕಾರಿ ವಿರುದ್ಧ ವಿಚಾರಣೆಗೆ ಅನುಮತಿ: ಆದೇಶ ರದ್ದುಪಡಿಸಿದ ಹೈಕೋರ್ಟ್
ಸಾರ್ವಜನಿಕ ಮಾಹಿತಿ ಅಧಿಕಾರಿ ವಿರುದ್ಧ ವಿಚಾರಣೆಗೆ ಅನುಮತಿ: ಆದೇಶ ರದ್ದುಪಡಿಸಿದ ಹೈಕೋರ್ಟ್
ಸಾರ್ವಜನಿಕ ಮಾಹಿತಿ ಅಧಿಕಾರಿ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ರಾಜ್ಯ ಮಾಹಿತಿ ಆಯೋಗವು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ನಿರ್ದೇಶನ ನೀಡಿದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದ ಮಹತ್ವದ ಪ್ರಕರಣದ ವಿಸ್ತೃತ ವಿವರಣೆ ಇಲ್ಲಿದೆ. (ಲೇಖಕರು: ಪ್ರಕಾಶ್ ನಾಯಕ್, ಮಂಗಳೂರು)
ಕಚೇರಿಯಲ್ಲಿ ಲಭ್ಯವಿಲ್ಲದ ಮಾಹಿತಿಯನ್ನು ನೀಡಲು ಅಸಾಧ್ಯ ಎಂಬ ಅಂಶವನ್ನು ಪರಿಗಣಿಸದೆ ಸಾರ್ವಜನಿಕ ಮಾಹಿತಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ಎಸಿಬಿಗೆ ನಿರ್ದೇಶನ ನೀಡಿದ ರಾಜ್ಯ ಮಾಹಿತಿ ಆಯೋಗದ ಆದೇಶವನ್ನು ರದ್ದುಪಡಿಸಿ ಕರ್ನಾಟಕ ಹೈಕೋರ್ಟ್ ನ ಗೌರವಾನ್ವಿತ ನ್ಯಾಯಮೂರ್ತಿ ಶ್ರೀಮತಿ ಜ್ಯೋತಿ ಮೂಲಿಮನಿ ಇವರಿದ್ದ ಏಕ ಸದಸ್ಯ ನ್ಯಾಯ ಪೀಠವು ಎ.ಬಿ.ಯೋಮಕೇಶಪ್ಪ ವಿರುದ್ಧ ಕರ್ನಾಟಕ ರಾಜ್ಯ ಮಾಹಿತಿ ಆಯೋಗ ಹಾಗೂ ಮತ್ತೊಬ್ಬರು ಈ ಪ್ರಕರಣದಲ್ಲಿ ದಿನಾಂಕ 19.1.2023 ರಂದು ಮಹತ್ವದ ತೀರ್ಪು ನೀಡಿದೆ.
ಪ್ರಕರಣದ ಸಾರಾಂಶ ಈ ಕೆಳಗಿನಂತಿದೆ.
ಶ್ರೀ ಕೆ. ಪ್ರಕಾಶ ರೆಡ್ಡಿ ಎಂಬವರು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಚೆಕ್ ಪೋಸ್ಟ್ ಕಚೇರಿಯ ಒಳಗಡೆ ಮತ್ತು ಹೊರಗಡೆ ಅಳವಡಿಸಿದ ಕ್ಯಾಮರಾದಲ್ಲಿ ದಿನಾಂಕ 1.4.2016 ರಿಂದ ತಾವು ಅರ್ಜಿ ಸಲ್ಲಿಸಿದ ದಿನಾಂಕದ ವರೆಗೆ ದಾಖಲಾದ ಸಿ.ಸಿ.ಟಿ.ವಿ. ಫೂಟೇಜಿನ ವಿವರಗಳನ್ನು ನೀಡುವಂತೆ ಕೋರಿ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 6(1)ರ ಪ್ರಕಾರ ದಿನಾಂಕ 22.11.2017 ರಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿದರು.
ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಸಹಾಯಕ ಪ್ರಾದೇಶಿಕ ಸಾರಿಗೆ ಅಧಿಕಾರಿಯಾಗಿದ್ದ ಹಾಗೂ ಈ ರಿಟ್ ಪ್ರಕರಣದ ಅರ್ಜಿದಾರರಾದ ಶ್ರೀ ಎ.ಬಿ.ಯೋಮಕೇಶಪ್ಪ ಅವರು ಸಿಡಿ ಹಾಗೂ ಸಿಸಿಟಿವಿ ದೃಶ್ಯಾವಳಿಯ ದಾಖಲೆಗಳು ತಮ್ಮ ಕಚೇರಿಯಲ್ಲಿ ಲಭ್ಯವಿಲ್ಲ ಎಂಬುದಾಗಿ ದಿನಾಂಕ 24.12.2017 ರಂದು ಶ್ರೀ ಕೆ. ಪ್ರಕಾಶ ರೆಡ್ಡಿ ಅವರಿಗೆ ಹಿಂಬರಹ ನೀಡಿದರು.
ಸದರಿ ಹಿಂಬರಹದಿಂದ ಬಾಧಿತರಾದ ಅರ್ಜಿದಾರ ಶ್ರೀ ಪ್ರಕಾಶ್ ರೆಡ್ಡಿ ಅವರು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 19(1) ರಡಿ ಪ್ರಥಮ ಮೇಲ್ಮನವಿಯನ್ನು ದಿನಾಂಕ 27.12.2017 ರಂದು ಸಲ್ಲಿಸಿದರು. ಪ್ರಥಮ ಮೇಲ್ಮನವಿ ಪ್ರಾಧಿಕಾರವು ಸಕಾಲದಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಇದ್ದ ಕಾರಣ ರಾಜ್ಯ ಮಾಹಿತಿ ಆಯೋಗದ ಸಮಕ್ಷಮ ಎರಡನೆಯ ಮೇಲ್ಮನವಿಯನ್ನು ದಿನಾಂಕ 5.3.2018 ರಂದು ಸಲ್ಲಿಸಿದರು.
ಸದರಿ ಎರಡನೆಯ ಮೇಲ್ಮನವಿಯನ್ನು ನೋಂದಾಯಿಸಿ ರಾಜ್ಯ ಮಾಹಿತಿ ಆಯೋಗ ಹೊರಡಿಸಿದ ನೋಟಿಸನ್ನು ಸ್ವೀಕರಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಯವರು ನಂಗಲಿ ಚೆಕ್ ಪೋಸ್ಟ್ ನ ಕಚೇರಿಯ ಒಳಗಡೆ ಮತ್ತು ಹೊರಗಡೆ ಅಳವಡಿಸಿದ್ದ ಕ್ಯಾಮರಾದ ವಿವರಗಳು ತಮ್ಮ ಕಚೇರಿಯಲ್ಲಿ ಲಭ್ಯವಿಲ್ಲ ಎಂಬ ಹಿಂಬರಹವನ್ನು ದಿನಾಂಕ 24.12.2017 ರಂದು ಅರ್ಜಿದಾರರಿಗೆ ನೀಡಲಾಗಿದೆ ಎಂಬ ವಿವರಣೆಯನ್ನು ಆಯೋಗಕ್ಕೆ ಸಲ್ಲಿಸಿದರು.
ಆದರೆ ರಾಜ್ಯ ಮಾಹಿತಿ ಆಯೋಗ ಈ ವಿವರಣೆಯನ್ನು ಒಪ್ಪದೇ ಕೋರಿರುವ ಮಾಹಿತಿ ಒದಗಿಸದೆ ಇರುವುದರಿಂದ ತಮ್ಮ ವಿರುದ್ಧ ಯಾಕೆ ಶಿಸ್ತು ಕ್ರಮ ಕೈಗೊಳ್ಳಬಾರದೆಂದು ಕಾಯಿದೆಯ ಸೆಕ್ಷನ್ 20(2) ರಡಿ ಕಾರಣ ಕೇಳಿ ನೋಟಿಸ್ ಅನ್ನು ಸಾರ್ವಜನಿಕ ಮಾಹಿತಿ ಅಧಿಕಾರಿಯವರಿಗೆ ನೀಡಿತು.
ಸದರಿ ನೋಟಿಸ್ ಅನ್ನು ಸ್ವೀಕರಿಸಿದ ಸಾರ್ವಜನಿಕ ಮಾಹಿತಿ ಅಧಿಕಾರಿಯವರು ಅರ್ಜಿದಾರರಾದ ಶ್ರೀ ಕೆ.ಪ್ರಕಾಶ ರೆಡ್ಡಿ ಅವರಿಗೆ ದಿನಾಂಕ 21.5.2018 ರಂದು ಮತ್ತೊಮ್ಮೆ ವಿವರಣಾತ್ಮಕ ಮಾಹಿತಿಯನ್ನು ನೀಡಿದರು. ಆರ್ ಟಿ ಓ ಕಚೇರಿಯಲ್ಲಿ ಅರ್ಜಿದಾರರು ಕೋರಿರುವ ಸಿಡಿ ಹಾಗೂ ಸಿಸಿಟಿವಿ ದಾಖಲೆಗಳು ಲಭ್ಯವಿಲ್ಲ. ಸಿಸಿಟಿವಿಯ ಸಂಗ್ರಹಣಾ ಸಾಮರ್ಥ್ಯ ತೀರ ಕಡಿಮೆ ಇದೆ ಎಂಬ ಮಾಹಿತಿ ನೀಡಿದರು.
ಆಯೋಗವು ನೀಡಿದ ಶೋಕಾಸ್ ನೋಟಿಸಿಗೆ ಈ ಕೆಳಗಿನ ವಿವರಣೆಯನ್ನು ಸಲ್ಲಿಸಿದರು. ಆರ್‌ಟಿಓ ಕಚೇರಿಯಲ್ಲಿ ಅಳವಡಿಸಲಾದ ಸಿಸಿ ಟಿವಿಯು ಒಂದು ವಾರದ ವಿವರಗಳನ್ನು ಮಾತ್ರ ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಒಂದು ವಾರದ ಬಳಿಕ ತನ್ನಿಂದ ತಾನೇ ಮಾಹಿತಿ ಅಳಿಸಿ ಹೋಗುತ್ತದೆ. ಸಿಸಿಟಿವಿಯ ನಿರ್ವಹಣೆಯ ಕುರಿತು ಹಾಗೂ ಎಷ್ಟು ಅವಧಿಯವರೆಗೆ ಕಾದಿರಿಸಬೇಕು ಎಂಬ ಬಗ್ಗೆ ಮುಖ್ಯ ಕಚೇರಿಯಿಂದ ಯಾವುದೇ ನಿರ್ದೇಶನಾತ್ಮಕ ಸುತ್ತೋಲೆ ಬಂದಿರುವುದಿಲ್ಲ. ಒಂದು ವಾರಕ್ಕಿಂತ ಅಧಿಕ ಅವಧಿಯ ವರೆಗೆ ಮಾಹಿತಿ ಸಂಗ್ರಹ ಸಾಧ್ಯವಿಲ್ಲ ಎಂಬುದಾಗಿ ಆಯೋಗಕ್ಕೆ ವಿವರಣೆ ನೀಡಿದರು.
ತಮ್ಮ ಕಚೇರಿಯಲ್ಲಿ ಅರ್ಜಿದಾರರು ಕೋರಿರುವ ಮಾಹಿತಿ ಲಭ್ಯವಿಲ್ಲ ಎಂಬ ಸಾರ್ವಜನಿಕ ಮಾಹಿತಿ ಅಧಿಕಾರಿಯವರ ವಿವರಣೆಯನ್ನು ರಾಜ್ಯ ಮಾಹಿತಿ ಆಯೋಗವು ತಿರಸ್ಕರಿಸಿತು. ಹಾಗೂ ಕಾಯ್ದೆಯ ಸೆಕ್ಷನ್ 19(8)(ಎ) ರಡಿ ಪ್ರದತ್ತ ಅಧಿಕಾರವನ್ನು ಚಲಾಯಿಸಿ ಸಾರ್ವಜನಿಕ ಮಾಹಿತಿ ಅಧಿಕಾರಿಯ ವಿರುದ್ಧ ಪ್ರಕರಣ ದಾಖಲಿಸಿ ವಿಚಾರಣೆ ನಡೆಸುವಂತೆ ಎಸಿಬಿಗೆ ನಿರ್ದೇಶನ ನೀಡಿತು. ಆಯೋಗದ ಸದರಿ ಆದೇಶದಿಂದ ಬಾಧಿತರಾದ ಸಾರ್ವಜನಿಕ ಮಾಹಿತಿ ಅಧಿಕಾರಿಯವರು ಸದರಿ ಆದೇಶವನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಂಖ್ಯೆ 30170/2018 ಅನ್ನು ದಾಖಲಿಸಿದರು.
ರಿಟ್ ಅರ್ಜಿದಾರರ ಪರ ವಾದವನ್ನು ಮಂಡಿಸಿದ ವಕೀಲರು ರಾಜ್ಯ ಮಾಹಿತಿ ಆಯೋಗವು ಪ್ರಕರಣವನ್ನು ಎಸಿಬಿಗೆ ಕಳುಹಿಸಿರುವುದು ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 19(8)(ಎ) ಯ ವ್ಯಾಪ್ತಿಯನ್ನು ಮೀರಿ ಹೊರಡಿಸಿದ ಆದೇಶವಾಗಿದೆ. ಆದುದರಿಂದ ಸದರಿ ಆದೇಶವನ್ನು ರದ್ದು ಪಡಿಸಬೇಕು ಎಂದು ಪ್ರಾರ್ಥಿಸಿದರು. ತಮ್ಮ ವಾದಕ್ಕೆ ಪೂರಕವಾಗಿ ಮಾನ್ಯ ಸರ್ವೋಚ್ಛ ನ್ಯಾಯಾಲಯವು ಸಿಬಿಎಸ್ಇ ವಿರುದ್ಧ ಆದಿತ್ಯ ಬಂಡೋಪಾಧ್ಯಾಯ ಮತ್ತಿತರರು ಈ ಪ್ರಕರಣದಲ್ಲಿ ನೀಡಿದ ತೀರ್ಪನ್ನು ಉಲ್ಲೇಖಿಸಿದರು.
ಆಯೋಗವನ್ನು ಪ್ರತಿನಿಧಿಸಿದ ವಕೀಲರು ಮಾಹಿತಿ ನೀಡಲು ನಿರಾಕರಿಸಿದ ಅಧಿಕಾರಿಯ ವಿರುದ್ಧ ವಿಚಾರಣೆ ನಡೆಸುವಂತೆ ಎಸಿಬಿಗೆ ನಿರ್ದೇಶಿಸಿದ ಆದೇಶವು ಕ್ರಮಬದ್ಧವಾಗಿದೆ ಎಂಬ ವಾದವನ್ನು ಮಂಡಿಸಿದರು.
ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಮಾನ್ಯ ಹೈಕೋರ್ಟ್ ತನ್ನ ಕಚೇರಿಯಲ್ಲಿ ಲಭ್ಯವಿಲ್ಲದ ಮಾಹಿತಿಯನ್ನು ಒದಗಿಸುವುದು ಅಸಂಭವ ಎಂಬುದು ಸಾಮಾನ್ಯ ಜ್ಞಾನವಾಗಿದೆ. ಆದರೆ ಮಾಹಿತಿ ಆಯುಕ್ತರು ಈ ಅಂಶವನ್ನು ಪರಿಗಣಿಸದೆ ತಮ್ಮ ವ್ಯಾಪ್ತಿ ಮೀರಿ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 19(8)(ಎ)ರಡಿ ತಮಗೆ ಪ್ರದತ್ತ ವಾಗಿಲ್ಲದ ಅಧಿಕಾರವನ್ನು ಚಲಾಯಿಸಿರುವುದು ನಿಯಮಬಾಹಿರವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿತು.
ಮಾಹಿತಿ ಹಕ್ಕು ಕಾಯ್ದೆಯ ಮುಖ್ಯ ಉದ್ದೇಶ ಪಾರದರ್ಶಕತೆ ಹಾಗೂ ಉತ್ತರದಾಯಿತ್ವವನ್ನು ಕಾಪಾಡುವುದೇ ಆಗಿದೆ. ಪಾರದರ್ಶಕತೆಯ ಬಗ್ಗೆ ಕಾಯ್ದೆಯ ಸೆಕ್ಷನ್ 2 (ಎಫ್) ನಲ್ಲಿ ವಿವರಿಸಲಾಗಿದೆ. ದಾಖಲೆಗಳ ಕುರಿತು ಸೆಕ್ಷನ್ 2(ಐ) ಯಲ್ಲಿ ವಿವರಿಸಲಾಗಿದೆ. ಸೆಕ್ಷನ್ 2(ಜೆ) ಯಲ್ಲಿ ಮಾಹಿತಿ ಪಡೆಯುವ ಹಕ್ಕಿನ ಕುರಿತು ವಿವರಣೆ ಇದೆ. ಸರಕಾರದ ನಿಯಂತ್ರಣಕ್ಕೆ ಒಳಪಟ್ಟ ಸಾರ್ವಜನಿಕ ಸಂಸ್ಥೆಯ ಸಿಬ್ಬಂದಿ ತಮ್ಮ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಗಳನ್ನು ಕೋರಿ ಸಾರ್ವಜನಿಕರು ಅರ್ಜಿ ಸಲ್ಲಿಸಿದಾಗ ಸದರಿ ಮಾಹಿತಿಗಳನ್ನು ಒದಗಿಸಬೇಕೆಂಬುದು ನಿರ್ವಿವಾದ ಅಂಶವಾಗಿದೆ. ಆದರೆ ಲಭ್ಯ ಇಲ್ಲದ ಮಾಹಿತಿಯನ್ನು ಒದಗಿಸುವುದು ಅಸಂಭವ ಎಂಬುದು ಕೂಡ ಸರ್ವವಿದಿತ.
ಸಿಸಿಟಿವಿಯ ಸಂಗ್ರಹ ಸಾಮರ್ಥ್ಯವು ಕಡಿಮೆ ಇರುವುದರಿಂದ ಕೋರಿರುವ ಮಾಹಿತಿಯು ಸಂಗ್ರಹವಾಗಿಲ್ಲ. ಹಾಗಾಗಿ ಮಾಹಿತಿ ಒದಗಿಸಲು ಸಾಧ್ಯವಿಲ್ಲ ಎಂಬುದಾಗಿ ಅರ್ಜಿದಾರರಿಗೆ ಸಾರ್ವಜನಿಕ ಮಾಹಿತಿ ಹಕ್ಕು ಅಧಿಕಾರಿಯವರು ಸಕಾಲದಲ್ಲಿ ಮಾಹಿತಿ ನೀಡಿರುತ್ತಾರೆ. ಆದರೆ ರಾಜ್ಯ ಮಾಹಿತಿ ಆಯೋಗ ಈ ಯಾವುದೇ ಅಂಶಗಳನ್ನು ಪರಿಗಣಿಸದೆ ಇರುವುದು ತೀರಾ ವಿಷಾದನೀಯ. ಲಭ್ಯ ಮಾಹಿತಿಗಳನ್ನು ಮಾತ್ರ ಒದಗಿಸಲು ಮಾಹಿತಿ ಹಕ್ಕು ಕಾಯ್ದೆ ಇಡಿ ಅವಕಾಶವಿದೆ. ಸಾರ್ವಜನಿಕ ಮಾಹಿತಿ ಅಧಿಕಾರಿಯು ಮಾಹಿತಿಯನ್ನು ತಾನೇ ಸೃಷ್ಟಿಸಿ ನೀಡಲು ಅವಕಾಶವಿಲ್ಲ ಎಂಬಿತ್ಯಾದಿ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ ಹೈಕೋರ್ಟ್ ರಾಜ್ಯ ಮಾಹಿತಿ ಆಯುಕ್ತರು ರಿಟ್ ಅರ್ಜಿದಾರರ ವಿರುದ್ಧ ವಿಚಾರಣೆ ನಡೆಸುವಂತೆ ಎಸಿಬಿಗೆ ನಿರ್ದೇಶನ ನೀಡಿ ಹೊರಡಿಸಿದ ದಿನಾಂಕ 28.5.2018 ರ ಆದೇಶವನ್ನು ರದ್ದುಪಡಿಸಿ ರಿಟ್ ಅರ್ಜಿಯನ್ನು ಪುರಸ್ಕರಿಸಿತು.
✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಂಗ ಇಲಾಖೆ