ನ್ಯಾಯಾಧೀಶರಿಗೆ ಬೆದರಿಕೆ ಪತ್ರ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳಾ ಜಡ್ಜ್!
ನ್ಯಾಯಾಧೀಶರಿಗೆ ಬೆದರಿಕೆ ಪತ್ರ: ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳಾ ಜಡ್ಜ್!
ನ್ಯಾಯಾಧೀಶರೊಬ್ಬರಿಗೆ ಅನಾಮಿಕ ಯುವಕನೊಬ್ಬ ಬೆದರಿಕೆ ಪತ್ರ ಬರೆದು ಅದನ್ನು ತಂದು ನ್ಯಾಯಾಧೀಶರ ಸ್ಟೆನೋಗ್ರಾಫರ್ ಕೈಗೆ ಕೊಟ್ಟು ಹೋಗಿದ್ದ. ಇಂತಹ ಒಂದು ಅಚ್ಚರಿಯ ಆಘಾತಕಾರಿ ಘಟನೆ ನಡೆದಿರುವುದು ರಾಜಸ್ತಾನದ ಜೈಪುರದಲ್ಲಿ.
20 ಲಕ್ಷ ರೂಪಾಯಿ ರೆಡಿ ಮಾಡಿ ಇಡಿ.. ಇಲ್ಲದಿದ್ದರೆ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ನಾಶಪಡಿಸಲಾಗುವುದು. ಸಮಯ ಮತ್ತು ಸ್ಥಳವನ್ನು ಶೀಘ್ರದಲ್ಲೇ ತಿಳಿಸುತ್ತೇನೆ ಎಂಬುದಾಗಿ ಪತ್ರದಲ್ಲಿ ಹೇಳಲಾಗಿದೆ.
ತಾನು ನ್ಯಾಯಾಧೀಶರ ಮಕ್ಕಳು ಕಲಿಯುತ್ತಿರುವ ಶಾಲೆಯಿಂದ ಬಂದಿರುವುದಾಗಿ ತಿಳಿಸಿ ಆತ ಈ ಪತ್ರವನ್ನು ಸ್ಟೆನೋ ಕೈಗೆ ಕೊಟ್ಟಿದ್ದ. ನ್ಯಾಯಾಲಯದ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದಾಗ ಸುಮಾರು 20 ವರ್ಷದ ಯುವಕನೊಬ್ಬ ಈ ಕೃತ್ಯ ಎಸಗಿರುವುದು ಕಂಡುಬಂದಿದೆ.
ಈ ಘಟನೆಯಿಂದ ಆ ಮಹಿಳಾ ನ್ಯಾಯಾಧೀಶರು ಆಘಾತಗೊಂಡಿದ್ದಾರೆ. ಏಕೆಂದರೆ, ಕಳೆದ ಫೆಬ್ರವರಿ 27ರಂದು ನ್ಯಾಯಾಧೀಶರು ವಾಸ ಮಾಡುವ ಸರ್ಕಾರಿ ವಸತಿಗೃಹಕ್ಕೂ ಇದೇ ರೀತಿಯ ಬೆದರಿಕೆ ಪತ್ರ ಬಂದಿತ್ತು.
ಘಟನೆಯ ಬಗ್ಗೆ ನ್ಯಾಯಾಧೀಶರು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ತಮ್ಮ ನಿತ್ಯದ ಚಲನವಲನ ಹಾಗೂ ಆಗುಹೋಗುಗಳ ಬಗ್ಗೆ ಯಾರೋ ತಮ್ಮ ಮೇಲೆ ಕಣ್ಣಿಟ್ಟಿದ್ದಾರೆ ಎಂದು ಜಡ್ಜ್ ಆತಂಕ ವ್ಯಕ್ತಪಡಿಸಿದ್ದಾರೆ.