ಚೆಕ್ ಅಮಾನ್ಯ ಪ್ರಕರಣ: ದೂರುದಾರ ವಕೀಲರ ಮೇಲೆ ಆರೋಪಿ ಮಾರಣಾಂತಿಕ ಹಲ್ಲೆ!
ಚೆಕ್ ಅಮಾನ್ಯ ಪ್ರಕರಣ: ದೂರುದಾರ ವಕೀಲರ ಮೇಲೆ ಆರೋಪಿ ಮಾರಣಾಂತಿಕ ಹಲ್ಲೆ!
ಚೆಕ್ ಅಮಾನ್ಯ ಪ್ರಕರಣದಲ್ಲಿ ದೂರುದಾರರ ಪರವಾಗಿ ವಾದ ಮಂಡಿಸಿದ ವಕೀಲರ ಮೇಲೆ ನ್ಯಾಯಾಲಯದ ಆವರಣದಲ್ಲಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಬೆಂಗಳೂರಿನ 21ನೇ ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಕೋರ್ಟ್ ಆವರಣದಲ್ಲಿ ನಡೆದಿದೆ.
ಚೆಕ್ ಅಮಾನ್ಯ ಪ್ರಕರಣದ ಆರೋಪಿ ಕಾಂಚನ ನಾಚಪ್ಪ ಅವರು ದೂರುದಾರರ ಪರವಾಗಿ ವಕಾಲತ್ತು ವಹಿಸಿದ್ದ ಕೃಷ್ಣಾ ರೆಡ್ಡಿ ಎಂಬ ವಕೀಲರ ವಿರುದ್ಧ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದು, ಗಂಭೀರ ಸ್ವರೂಪದ ಗಾಯಗೊಂಡಿರುವ ವಕೀಲರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ವಕೀಲರು ನೀಡಿದ ದೂರಿನ ಅನ್ವಯ ಆರೋಪಿ ಕಾಂಚನಾ ನಾಚಪ್ಪ ಅವರ ವಿರುದ್ಧ ಐಪಿಸಿ ಸೆಕ್ಷನ್ 307, 504, 324ರಡಿ ಪ್ರಕರಣ ದಾಖಲಿಸಲಾಗಿದೆ.
ಪ್ರಕರಣದ ವಿವರ:
ದೂರುದಾರರಾದ ಹರೀಶ್ ಅವರು ತಮ್ಮಿಂದ 4.5 ಲಕ್ಷ ರೂಪಾಯಿ ಪಡೆದು ಮರಳಿಸದೇ ಇರುವ ಕಾಂಚನಾ ಎಂಬವರ ವಿರುದ್ಧ ಚೆಕ್ ಅಮಾನ್ಯ ಪ್ರಕರಣ ಹೂಡಿದ್ದರು.
ಕಳೆದ ಮೂರು ವರ್ಷಗಳಿಂದ ಹಣ ನೀಡುವುದಾಗಿ ಹೇಳುತ್ತಾ ಪ್ರಕರಣ ಮುಂದೂಡಿಕೆ ಪಡೆಯುತ್ತಿದ್ದ ಆರೋಪಿ ಕಾಂಚನಾ, ಹಣ ಮರಳಿಸುವುದಿಲ್ಲ, ಪ್ರಕರಣ ನಡೆಸುವುದಾಗಿ ವಕೀಲರ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದರು.
ಈ ಮಧ್ಯೆ, ಆರೋಪಿ ಕಾಂಚನಾ ನಾಚಪ್ಪ ಅವರ ಪರ ವಕಾಲತ್ತು ವಹಿಸಿದ್ದ ರಾಜಶೇಖರ ಅವರು ಅರ್ಜಿದಾರ ಹರೀಶ್ ಅವರನ್ನು ಪಾಟೀ ಸವಾಲಿಗೆ ಒಳಪಡಿಸಿದರು.
ವಿಚಾರಣೆಯ ಬಳಿಕ ಕೋರ್ಟ್ ಹಾಲ್‌ನಿಂದ ಹೊರಬಂದ ಕಾಂಚನ ಮೊದಲಿಗೆ ತಮ್ಮ ವಕೀಲರಾದ ರಾಜಶೇಖರ ಜೊತೆಗೆ ಏರುಧ್ವನಿಯಲ್ಲಿ ಜಗಳ ಮಾಡಿಕೊಂಡರು. ಪ್ರಕರಣ ವಿಳಂಬ ಮಾಡಿದ್ದಕ್ಕೆ ನ್ಯಾಯಾಲಯ ವಿಧಿಸಿದ ದಂಡದ ಮೊತ್ತವನ್ನು ತಾನು ಪಾವತಿಸುವುದಿಲ್ಲ ಎಂದು ಹೇಳಿದ್ದರು.
ಆ ಬಳಿಕ, ದೂರುದಾರರ ಪರ ವಕೀಲರಾದ ಕೃಷ್ಣಾ ರೆಡ್ಡಿ ಜೊತೆಗೆ ವಾಗ್ವಾದ ನಡೆಸಿದ ಆರೋಪಿ ಕಾಂಚನ ಬ್ಯೂಟಿ ಪಾರ್ಲರ್‌ನಲ್ಲಿ ಬಳಸುವ ಚಾಕುವಿನಿಂದ ದಾಳಿ ನಡೆಸಿ ಪರಾರಿಯಾದರು.
.