ಬ್ಯಾಂಕ್ ಬ್ಯಾಲೆನ್ಸ್ ನಿಮ್ಮ ಆದಾಯದ ಮಾನದಂಡವೇ...? ಹೈಕೋರ್ಟ್ ಹೇಳಿದ್ದೇನು..?
ಬ್ಯಾಂಕ್ ಬ್ಯಾಲೆನ್ಸ್ ನಿಮ್ಮ ಆದಾಯದ ಮಾನದಂಡವೇ...? ಹೈಕೋರ್ಟ್ ಹೇಳಿದ್ದೇನು..?
ನಿಮ್ಮ ಬ್ಯಾಂಕ್ ಖಾತೆಯ ಪಾಸ್‌ಬುಕ್‌ನಲ್ಲಿ ನಮೂದಾಗಿರುವ ಮೊತ್ತವನ್ನೇ ಆಧಾರವಾಗಿಟ್ಟುಕೊಂಡು ನಿಮ್ಮ ಆದಾಯವನ್ನು ಅಳೆಯಬಹುದೇ..? ಬ್ಯಾಂಕ್ ಬ್ಯಾಲೆನ್ಸ್ ನಿಮ್ಮ ಆದಾಯದ ಅಳತೆಗೋಲು ಆಗುತ್ತದೆಯೇ..?
ಈ ಪ್ರಶ್ನೆಗೆ ಕರ್ನಾಟಕ ಹೈಕೋರ್ಟ್ ಉತ್ತರ ನೀಡಿದೆ. ಬ್ಯಾಂಕ್ ಪಾಸ್ ಪುಸ್ತಕದಲ್ಲಿ ನಮೂದಾಗಿರುವ ಮೊತ್ತವನ್ನೇ ತಿಂಗಳ ಆದಾಯ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾ. ಪ್ರಭಾಕರ ಶಾಸ್ತ್ರಿ ಅವರಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಏನಿದು ಪ್ರಕರಣ?
ಅಪಘಾತ ಪ್ರಕರಣವೊಂದಲ್ಲಿ ಬ್ಯಾಂಕ್ ಪಾಸ್ ಬುಕ್‌ನಲ್ಲಿ ನಮೂದಾಗಿರುವ ಅಂಕಿ ಅಂಶಗಳನ್ನು ಪರಿಗಣಿಸಿ ಪರಿಹಾರ ನೀಡುವಂತೆ ಮೋಟಾರು ವಾಹನ ಅಪಘಾತಗಳ ನ್ಯಾಯಮಂಡಳಿ ಆದೇಶ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ನ್ಯಾಷನಲ್ ಇನ್ಶೂರೆನ್ಸ್ ಕಂಪೆನಿ ಹೈಕೋರ್ಟ್ ಮೊರೆ ಹೋಗಿತ್ತು.
ಸದ್ರಿ ಪ್ರಕರಣದಲ್ಲಿ ಮೃತರು ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ತಿಂಗಳಿಗೆ 50 ಸಾವಿರ ಸಂಪಾದನೆ ಮಾಡುತ್ತಿದ್ದರು ಎಂದು ಮೃತರ ಪತ್ನಿ ತಿಳಿಸಿದ್ದರು. ಆದರೆ, ಈ ವಾದವನ್ನು ಸಮರ್ಥಿಸಲು ಯಾವುದೇ ದಾಖಲೆಯನ್ನು ಸಲ್ಲಿಸಿರಲಿಲ್ಲ. ಬದಲಿಗೆ, ಮೃತರ ಎರಡು ಬ್ಯಾಂಕ್ ಪಾಸ್ ಪುಸ್ತಕಗಳನ್ನು ಸಲ್ಲಿಸಲಾಗಿತ್ತು.
ಈ ಎರಡೂ ಖಾತೆಗಳಲ್ಲಿ ಒಂದು ಮೃತರಿಗೆ ಸೇರಿದ್ದರೆ, ಇನ್ನೊಂದು ಪತ್ನಿಯ ಜೊತೆಗೆ ಜಂಟಿ ಖಾತೆಯಾಗಿದೆ. ಎರಡೂ ಚಾಲ್ತಿ ಖಾತೆಗಳಲ್ಲ ಎಂದು ನ್ಯಾಯಪೀಠ ಹೇಳಿದೆ. ಒಂದು ವೇಳೆ, 50 ಸಾವಿರ ರೂ. ಎಂದು ನಂಬಿದರೂ ಆದಾಯ ತೆರಿಗೆ ಪಾವತಿಸಬೇಕಾಗುತ್ತದೆ. ಆ ಯಾವುದೇ ದಾಖಲೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿಲ್ಲ. ಹೀಗಾಗಿ ಬ್ಯಾಂಕ್ ಖಾತೆಯಲ್ಲಿ ನಮೂದಾಗಿರುವ ಮೊತ್ತವನ್ನು ಆದಾಯ ಎಂದು ಪರಿಗಣಿಸಲಾಗದು ಎಂದು ನ್ಯಾಯಪೀಠ ಸ್ಪಷ್ಟಪಡಿಸಿದ್ದು, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದೆ.
23.04 ಲಕ್ಷ ರೂ. ಪರಿಹಾರ ನೀಡಬೇಕು ಎಂಬ ನ್ಯಾಯಮಂಡಳಿಯ ಆದೇಶವನ್ನು ಮಾರ್ಪಾಡು ಮಾಡಿ 21 ಲಕ್ಷ ರೂ. ನೀಡುವಂತೆ ಆದೇಶ ನೀಡಿದೆ.