ಒಂಟಿ ಮಹಿಳೆಯಿಂದ ಮಗು ದತ್ತು: ಸಿವಿಲ್ ನ್ಯಾಯಾಲಯಕ್ಕೆ ಹೈಕೋರ್ಟ್ ಛೀಮಾರಿ ಹಾಕಿದ್ದೇಕೆ..?
ಒಂಟಿ ಮಹಿಳೆಯಿಂದ ಮಗು ದತ್ತು: ಸಿವಿಲ್ ನ್ಯಾಯಾಲಯಕ್ಕೆ ಹೈಕೋರ್ಟ್ ಛೀಮಾರಿ ಹಾಕಿದ್ದೇಕೆ..?
ಒಂಟಿ ಮಹಿಳೆ ಮಗುವನ್ನು ದತ್ತು ಪಡೆಯುವ ವಿಚಾರದಲ್ಲಿ ಸಿವಿಲ್ ನ್ಯಾಯಾಲಯ ನೀಡಿದ ಆದೇಶವನ್ನು ರದ್ದುಪಡಿಸಿದ ಬಾಂಬೆ ಹೈಕೋರ್ಟ್, ಟ್ರಯಲ್ ಕೋರ್ಟ್‌ನ ಮನೋಸ್ಥಿತಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡು ಛೀಮಾರಿ ಹಾಕಿದೆ.
ವಿಚ್ಚೇದಿತ ಮಹಿಳೆ ಉದ್ಯೋಗಿಯಾಗಿದ್ಧಾರೆ. ಹಾಗಾಗಿ ಅವರಿಗೆ ಮಗುವಿನ ಬಗ್ಗೆ ಸೂಕ್ತ ಕಾಳಜಿ ವಹಿಸಲು ಮತ್ತು ಆರೈಕೆ ಮಾಡಲು ಸಾಧ್ಯವಾಗದು ಎಂಬ ಕಾರಣಕ್ಕೆ ಮಗುವನ್ನು ದತ್ತು ಪಡೆಯಲು ಭೂಸಾವಲ್ ಸಿವಿಲ್ ನ್ಯಾಯಾಲಯ ಅನುಮತಿ ನಿರಾಕರಿಸಿತ್ತು.
ಈ ತೀರ್ಪನ್ನು ಪ್ರಶ್ನಿಸಿ ಮೇಲ್ಮನವಿದಾರರಾದ ಶಬ್ನಮ್ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಗೌರಿ ಗೋಡ್ಸೆ ಅವರಿದ್ದ ನ್ಯಾಯಪೀಠ, ದುಡಿಯುವ ಮಹಿಳೆ ಬಗ್ಗೆ ನ್ಯಾಯಾಲಯ ಮಧ್ಯಕಾಲೀನ ಯುಗದ ಮನೋಸ್ಥಿತಿಯನ್ನು ತಾಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿತು.
ಒಂಟಿ ಮಹಿಳೆಗೆ ಅಥವಾ ಒಂಟಿ ಪೋಷಕರು ದತ್ತು ಪಡೆಯಲು ಕಾನೂನು ಸಮ್ಮತಿ ನೀಡಿದೆ. ಹೀಗಿರುವಾಗ ಸಿವಿಲ್ ನ್ಯಾಯಾಲಯದ ನಡೆ ಕಾನೂನು ಉದ್ದೇಶವನ್ನು ಮಣಿಸುತ್ತದೆ ಎಂದು ನ್ಯಾಯಪೀಠ ವಿಷಾದ ವ್ಯಕ್ತಪಡಿಸಿದೆ.
ಒಂಟಿ ಪೋಷಕರು ತಮ್ಮ ಬದುಕು ಕಟ್ಟಿಕೊಳ್ಳಲು ದುಡಿಯಲೇ ಬೇಕು. ಇದಕ್ಕೆ ಅಪರೂಪದಲ್ಲಿ ಅಪರೂಪದ ಪ್ರಕರಣಗಳು ಅಪವಾದ ಇರಬಹುದು. ಸಾಮಾನ್ಯವಾಗಿ ಒಂಟಿ ಪೋಷಕರು ದತ್ತು ಪೋಷಕರಾಗಲು ಅನರ್ಹರು ಎಂದು ತೀರ್ಪು ನೀಡಬೇಕಾದ ಪ್ರಸಂಗ ಬರುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಸಿವಿಲ್ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿತು. ಮತ್ತು ಮಗುವನ್ನು ದತ್ತು ಪಡೆಯಲು ಮಹಿಳೆಗೆ ಅವಕಾಶ ನೀಡಲಾಯಿತು.
ಪ್ರಕರಣ: ಶಬ್ನಮ್ ಜಹಾನ್ ಮೊಯಿನುದ್ದೀನ್ ಅನ್ಸಾರಿ Vs ಮಹಾರಾಷ್ಟ ಸರ್ಕಾರ