ನಕಲಿ ವೀಲುನಾಮೆ ದೃಢಪಡಿಸಿದ ನೋಟರಿ: ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ನಕಲಿ ವೀಲುನಾಮೆ ದೃಢಪಡಿಸಿದ ನೋಟರಿ: ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್
ನಕಲಿ ವೀಲುನಾಮೆ(ಮರಣ ಶಾಸನ) ದೃಢೀಕರಿಸಿದ (ಅಟೆಸ್ಟ್ ಮಾಡಿದ) ಆರೋಪದ ಮೇಲೆ ನೋಟರಿ ವಕೀಲರ ಮೇಲೆ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ನ್ಯಾ. ಆರ್. ನಟರಾಜನ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಘಟನೆಯ ವಿವರ
ಪ್ರಕರಣದಲ್ಲಿ ಅರ್ಜಿದಾರರ ವಿರುದ್ಧ ಮೊಕದ್ದಮೆಯ ದೂರುದಾರರು ಖಾಸಗಿ ದೂರು (ಪ್ರೈವೇಟ್ ಕಂಪ್ಲೇಂಟ್) ದಾಖಲಿಸಿದ್ದರು. ಅದನ್ನು ಆಧರಿಸಿ ಬೆಂಗಳೂರಿನ 44ನೇ ಹೆಚ್ಚುವರಿ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆಗೆ ಕಾಗ್ನಿಜೆನ್ಸ್ ಪಡೆದುಕೊಂಡಿತ್ತು.
ನ್ಯಾಯಾಲಯದ ಈ ಕ್ರಮವನ್ನು ಪ್ರಶ್ನಿಸಿ, ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ನೋಟರಿ ಕಾಯ್ದೆ -1952ರ ಕಲಂ 13ಕ್ಕೆ ಈ ಪ್ರಕ್ರಿಯೆ ವಿರುದ್ಧವಾಗಿದೆ. ಕಾನೂನು ಪ್ರಕಾರ ನಕಲಿ ವಿಲ್ ದೃಢೀಕರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಅಥವಾ ರಾಜ್ಯ ಸರ್ಕಾರದ ಅಧಿಕಾರಿಯು ಲಿಖಿತ ರೂಪದಲ್ಲಿ ದೂರು ಸಲ್ಲಿಸಬೇಕಾಗುತ್ತದೆ. ಈ ನಿಯಮ ಸದ್ರಿ ಪ್ರಕರಣದಲ್ಲಿ ಪಾಲನೆ ಆಗಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಇದರ ಜೊತೆಗೆ, ದೂರುದಾರರು ತಮ್ಮ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಪೂರಕ ದಾಖಲೆ ಒದಗಿಸಿಲ್ಲ. ಎಲ್ಲ ಆರೋಪಿಗಳು ಸೇರಿಕೊಂಡು ದುರುದ್ದೇಶದಿಂದ ನಕಲಿ ವಿಲ್ ರೆಡಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ, ಕ್ರಿಮಿನಲ್ ಪ್ರಕರಣ ಮತ್ತು ವಿಚಾರಣಾ ನ್ಯಾಯಾಲಯದ ವಿಚಾರಣೆಯನ್ನು ರದ್ದುಪಡಿಸಲಾಗಿದೆ ಎಂದು ನ್ಯಾಯಪೀಠ ಹೇಳಿದೆ.
.