ಸಹಕಾರ ಇಲಾಖೆಯಿಂದ ಬೇರ್ಪಟ್ಟ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ: ಸರ್ಕಾರ ಆದೇಶ
ಸಹಕಾರ ಇಲಾಖೆಯಿಂದ ಬೇರ್ಪಟ್ಟ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆ: ಸರ್ಕಾರ ಆದೇಶ
ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ಇಲಾಖೆಯನ್ನು ಕರ್ನಾಟಕ ರಾಜ್ಯ ಲೆಕ್ಕ ಪರಿಶೋಧನೆ ಮತ್ತು ಲೆಕ್ಕಪತ್ರ ಇಲಾಖೆಯಲ್ಲಿ ವಿಲೀನಗೊಳಿಸಲಾಗಿದೆ. ಅದನ್ನು ಲೆಕ್ಕಪತ್ರ ಇಲಾಖೆಯಲ್ಲಿ ಒಂದು ಪ್ರತ್ಯೇಕ ವಿಭಾಗವನ್ನಾಗಿ ಮಾಡಿ ವಿಲೀನ ಮಾಡಲಾಗಿದ್ದು, ಕರ್ನಾಟಕ ರಾಜ್ಯಪಾಲ ತಾವರ್ ಚಂದ್ ಗೆಹ್ಲೊಟ್ ಈ ಬಗ್ಗೆ ಅಧಿಕೃತ ಆದೇಶ ಹೊರಡಿಸಿದ್ದಾರೆ ಎಂದು ಆರ್ಥಿಕ ಇಲಾಖೆಯ ಅಧೀನ ಕಾರ್ಯದರ್ಶಿ ಎಂ. ರಾಜಮ್ಮ ತಿಳಿಸಿದ್ದಾರೆ.
ಇಲಾಖಾ ಲೆಕ್ಕಪರಿಶೋಧಕರಿಂದ ಲೆಕ್ಕ ಪರಿಶೋಧನೆ ಮಾಡಲು ಆಯ್ಕೆ ಮಾಡಿಕೊಂಡಲ್ಲಿ ಅಂತಹ ಸಹಕಾರ ಸಂಘಗಳ ಲೆಕ್ಕಪರಿಶೋಧನೆಯನ್ನು ರಾಜ್ಯ ಲೆಕ್ಕ ಪರಿಶೋಧನೆ ಇಲಾಖೆಯಲ್ಲಿ ವಿಲೀನಗೊಂಡ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಸಿಬ್ಬಂದಿಗಳೇ ನಿರ್ವಹಿಸಲು ಆದೇಶದಲ್ಲಿ ಸೂಚಿಸಲಾಗಿದೆ.
ಸಹಕಾರ ಸಂಘಗಳು ತಮ್ಮ ಮಹಾಸಭೆಯಲ್ಲಿ ಆಯ್ಕೆ ಮಾಡುವ ಸಿಎ ಯಾ ಲೆಕ್ಕಪರಿಶೋಧಕರಿಂದ ಆಡಿಟ್ ಮಾಡಲು ಅವಕಾಶ ನೀಡಲಾಗಿದೆ. ಈ ಬಗ್ಗೆ ಸಹಕಾರ ಸಂಘಗಳ ಕಾಯ್ದೆಗೆ 2013ರಲ್ಲಿ ತಿದ್ದುಪಡಿ ಮಾಡಲಾಗಿದೆ.
ತಿದ್ದುಪಡಿ ನಂತರ ಸಹಕಾರ ಇಲಾಖೆಯಲ್ಲಿ ಇರುವ ಲೆಕ್ಕ ಪರಿಶೋಧನಾ ಇಲಾಖೆಗೆ ಯಾವುದೇ ಆಡಿಟ್ ಕಾರ್ಯಗಳು ದೊರಕುತ್ತಿಲ್ಲ. ಸಿಬ್ಬಂದಿಗೆ ಕೆಲಸವೂ ಇಳಿಮುಖವಾಗಿದ್ದು, ಈ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯ ಲೆಕ್ಕ ಪರಿಶೋಧನಾ ಮತ್ತು ಲೆಕ್ಕಪತ್ರ ಇಲಾಖೆಯ ಕಾರ್ಯವೈಖರಿಯು ಸಹಕಾರ ಸಂಘಗಳ ಲೆಕ್ಕ ಪರಿಶೋಧಕನಾ ಇಲಾಖೆ ಸಿಬ್ಬಂದಿಯ ಕಾರ್ಯವನ್ನೇ ಹೋಲುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ.
ಸರ್ಕಾರದ ಆದೇಶ: ಆಇ 355 ರಾಲೆಪ 2022 ಬೆಂಗಳೂರು 28/03/2023