ಮಾಧ್ಯಮ ನಿರ್ಭೀತವಾಗಿರಬೇಕು, ಸರ್ಕಾರ ಟೀಕೆ ಮಾಡಿದ ಮಾತ್ರಕ್ಕೆ ರಾಷ್ಟ್ರೀಯ ಭದ್ರತೆಗೆ ಅಪಾಯವಲ್ಲ: ಸುಪ್ರೀಂ ಕೋರ್ಟ್
ಮಾಧ್ಯಮ ನಿರ್ಭೀತವಾಗಿರಬೇಕು, ಸರ್ಕಾರ ಟೀಕೆ ಮಾಡಿದ ಮಾತ್ರಕ್ಕೆ ರಾಷ್ಟ್ರೀಯ ಭದ್ರತೆಗೆ ಅಪಾಯವಲ್ಲ: ಸುಪ್ರೀಂ ಕೋರ್ಟ್
ಮಾಧ್ಯಮಗಳು ಸ್ವತಂತ್ರ ಮತ್ತು ನಿಷ್ಪಕ್ಷಪಾತವಾಗಿ ಹಾಗೆಯೇ ನಿರ್ಭೀತವಾಗಿ ಕಾರ್ಯನಿರ್ವಹಿಸಬೇಕು. ಸರ್ಕಾರದ ವಿರುದ್ಧ ಮಾಧ್ಯಮಗಳು ಕಟು ವಿಮರ್ಶೆ ಮಾಡಿತು ಎಂದ ಮಾತ್ರಕ್ಕೆ ಅದು ರಾಷ್ಟ್ರೀಯ ಭದ್ರತೆಗೆ ಅಪಾಯವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮೀಡಿಯಾ ವನ್ ಮಲಯಾಳಂ ಸುದ್ದಿವಾಹಿನಿಯ ಮೇಲಿನ ನಿರ್ಬಂಧ ತೆರವುಗೊಳಿಸುವ ಆದೇಶ ಪ್ರಕಟಿಸಿದ ಸಿಜೆಐ ಚಂದ್ರಚೂಡ್ ಮತ್ತು ನ್ಯಾ. ಹಿಮಾ ಕೊಹ್ಲಿ ನೇತೃತ್ವದ ದ್ವಿಸದಸ್ಯ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಸುಖಾ ಸುಮ್ಮನೆ ರಾಷ್ಟ್ರೀಯ ಭದ್ರತೆಗೆ ಅಪಾಯವಾಗಿದೆ ಎಂದು ಆರೋಪ ಮಾಡುವ ಹಾಗಿಲ್ಲ. ಒಂದು ವೇಳೆ, ಈ ರೀತಿಯ ಆರೋಪ ಮಾಡಿದರೆ ಸೂಕ್ತ ಸಾಕ್ಷ್ಯಾಧಾರಗಳನ್ನು ನ್ಯಾಯಪೀಠದ ಮುಂದೆ ಇಡಬೇಕು ಎಂದು ನ್ಯಾಯಪೀಠ ಗೃಹ ಸಚಿವಾಲಯದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತು.
ನಾಗರಿಕರಿಗೆ ಸತ್ಪ್ರಜೆಗಳಾಗಿ ದಿಟ್ಟ ಹಾಗೂ ನ್ಯಾಯಪರವಾಗಿ ಮುನ್ನಡೆಯಲು ಮಾಧ್ಯಮಗಳು ಸಹಕಾರಿ. ನಿರ್ಭೀತಿಯಿಂದ ಸತ್ಯ ಹೇಳಬೇಕಾಗಿರುವುದು ಮಾಧ್ಯಮದ ಕರ್ತವ್ಯ. ಪತ್ರಿಕಾ ಸ್ವಾತಂತ್ಯವೂ ಇದೇ ದಿಕ್ಕಿನಲ್ಲಿ ದೇಶ ಮುನ್ನಡೆಯುವಂತೆ ಮಾಡುತ್ತಿದೆ ಎಂಬುದನ್ನು ನ್ಯಾಯಪೀಠ ಉಲ್ಲೇಖಿಸಿತು.
ರಾಷ್ಟ್ರೀಯ ಭದ್ರತೆಗೆ ಅಪಾಯವೊಡ್ಡಿದೆ ಎಂದು ಆರೋಪಿಸಿ ಕೇಂದ್ರ ಸರ್ಕಾರ ಮೀಡಿಯಾ ವನ್ ಸುದ್ದಿವಾಹಿನಿಯ ಮೇಲೆ ನಿರ್ಬಂಧ ಹೇರಿತ್ತು. ಈ ನಿರ್ಧಾರವನ್ನು ಕೇರಳ ಹೈಕೋರ್ಟ್ ಕೂಡ ಎತ್ತಿಹಿಡಿದಿತ್ತು. ಈ ಆದೇಶದ ವಿರುದ್ಧ ಸುದ್ದಿಸಂಸ್ಥೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.