"ಪ್ರೊಫೆಷನಲ್ ಬೆಗ್ಗರ್" ಆದರೂ ಪತ್ನಿಗೆ ಜೀವನಾಂಶ ನೀಡಬೇಕು: ಹೈಕೋರ್ಟ್ ಆದೇಶ
"ಪ್ರೊಫೆಷನಲ್ ಬೆಗ್ಗರ್" ಆದರೂ ಪತ್ನಿಗೆ ಜೀವನಾಂಶ ನೀಡಬೇಕು: ಹೈಕೋರ್ಟ್ ಆದೇಶ
ಗಂಡನಿಂದ ವಿಚ್ಚೇದನ ಬಯಸಿ ಹೋರಾಟ ನಡೆಸುತ್ತಿರುವ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ವಿಚಾರಣಾ ನ್ಯಾಯಾಲಯವು ಸಂತ್ರಸ್ತ ಮಹಿಳೆ(ಪತ್ನಿ)ಗೆ ಮಾಸಿಕ ರೂ. 5000/- ಜೀವನಾಂಶ ನೀಡಬೇಕು ಎಂದು ಆದೇಶ ನೀಡಿತ್ತು.
ಈ ಆದೇಶವನ್ನು ಪ್ರಶ್ನಿಸಿ ದೂರುದಾರ ಪತಿಯು ಹೈಕೋರ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ
ನಡೆಸಿದ ನ್ಯಾ. ಎಚ್.ಎಸ್. ಮದನ್ ನೇತೃತ್ವದ ನ್ಯಾಯಪೀಠ, ಹಣದುಬ್ಬರ, ದರ ಏರಿಕೆಯ ಈ ಕಾಲದಲ್ಲಿ ಎಲ್ಲವೂ ದುಬಾರಿಯಾಗಿದೆ. ಒಬ್ಬ ಸಾಮಾನ್ಯ ಕೂಲಿ ಕಾರ್ಮಿಕ ದಿನಕ್ಕೆ ರೂ. 500 ಅಥವಾ ಅದಕ್ಕಿಂತ ಹೆಚ್ಚಿನ ಹಣ ಸಂಪಾದಿಸಬಹುದಾಗಿದೆ. ಹೀಗಿರುವಾಗ ಒಂದೊಮ್ಮೆ ಪತಿ "ಪ್ರೊಫೆಷನಲ್ ಬೆಗ್ಗರ್" (ವೃತ್ತಿಪರ ಭಿಕ್ಷುಕ)ನಾಗಿದ್ದರೂ ಪತ್ನಿಗೆ ಜೀವನಾಂಶ ನೀಡಲೇಬೇಕಾಗುತ್ತದೆ. ಇದು ಆತನ ನೈತಿಕ ಹೊಣೆಗಾರಿಕೆಯಾಗುತ್ತದೆ ಎಂದು ಹೇಳಿತು.
ವಿಚಾರಣಾ ನ್ಯಾಯಾಲಯದಲ್ಲಿ ಪತ್ನಿ ತನ್ನ ಗಂಡನಿಂದ ವಿಚ್ಚೇದನ ಕೋರಿ ಹಿಂದೂ ವಿವಾಹ ಕಾಯ್ದೆಯ ಕಲಂ 24ರಡಿ ಅರ್ಜಿ ಸಲ್ಲಿಸಿದ್ದರು. ಆಕೆಯು ಪತಿಯಿಂದ ತಿಂಗಳಿಗೆ ರೂ. 15000/- ಜೀವನಾಂಶ ಮತ್ತು 11000/- ದಾವಾ ವೆಚ್ಚ ನೀಡುವಂತೆ ಕೋರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ ರೂ. 5000/- ಜೀವನಾಂಶ ಮತ್ತು 5500/- ವ್ಯಾಜ್ಯದ ವೆಚ್ಚ ಪಾವತಿಸಲು ಪತಿಗೆ ಆದೇಶ ನೀಡಿತ್ತು.
ಹೆಂಡತಿಯ ಸಂಪಾದನಾ ಮಾರ್ಗಗಳನ್ನು ಸಾಬೀತುಪಡಿಸದೆ ಇರುವುದರಿಂದ ಜೀವನಾಂಶ ಮತ್ತು ವ್ಯಾಜ್ಯದ ವೆಚ್ಚ ಭರಿಸುವಂತೆ ಪತಿಗೆ ಆದೇಶ ನೀಡಿದ ವಿಚಾರಣಾ ನ್ಯಾಯಾಲಯದ ತೀರ್ಪು ಸಮರ್ಪಕವಾಗಿದೆ ಎಂದು ಹೈಕೋರ್ಟ್ ಹೇಳಿತು.
ಪ್ರಕರಣ: ಸಂದೀಪ್ Vs ಸುಮನ್ (ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್)
CR No. 1802/2023 Dated 22-03-2023