ಮೃತ ಮಗಳ ಜೀವನಾಂಶ: ಬಾಕಿ ಮೊತ್ತ ಪಡೆಯಲು ತಾಯಿ ಅರ್ಹಳು- ಮದ್ರಾಸ್ ಹೈಕೋರ್ಟ್
ಮೃತ ಮಗಳ ಜೀವನಾಂಶ: ಬಾಕಿ ಮೊತ್ತ ಪಡೆಯಲು ತಾಯಿ ಅರ್ಹಳು- ಮದ್ರಾಸ್ ಹೈಕೋರ್ಟ್
ದಾವೆ ಹೂಡಿದ್ದ ಕಾಲದಲ್ಲಿ ವಿಚ್ಚೇದಿತ ಪತ್ನಿ ಸಾವನ್ನಪ್ಪಿದ ಬಳಿಕ ಬಾಕಿ ಇರುವ ಜೀವನಾಂಶದ ಮೊತ್ತವನ್ನು ಆಕೆಯ ತಾಯಿಗೆ ನೀಡುವಂತೆ ಅರ್ಜಿದಾರರಿಗೆ ಮದ್ರಾಸ್ ಹೈಕೋರ್ಟ್ ಸೂಚಿಸಿದೆ.
ಮೃತ ಮಗಳ ಆಸ್ತಿಗೆ ತಾಯಿ ಕಾನೂನುಬದ್ಧ ಉತ್ತರಾಧಿಕಾರಿ. ಹಾಗಾಗಿ, ಮಗಳ ಜೀವನಾಂಶದ ಬಾಕಿ ಹಣ ಪಡೆಯಲು ತಾಯಿಗೆ ಅರ್ಹತೆ ಇದೆ ಎಂದು ನ್ಯಾ. ಶಿವಜ್ಞಾನಂ ನೇತೃತ್ವದ ನ್ಯಾಯಪೀಠ ತೀರ್ಪು ನೀಡಿದೆ.
ಹಿಂದೂ ಉತ್ತರಾಧಿಕಾರ ಕಾಯ್ದೆಯ ಸೆಕ್ಷನ್ 14(1) (2)ರ ಸಹವಾಚನದಿಂದ ಜೀವನಾಂಶ ಬಾಕಿಯನ್ನು ಹಿಂದೂಗಳು ಡಿಕ್ರಿ ಪ್ರಕಾರ ಸಂಪಾದಿಸಿದ ಸ್ಥಿರ ಮತ್ತು ಚರ ಆಸ್ತಿ ಎಂದು ಪರಿಗಣಿಸಬೇಕು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಬಾಕಿ ಜೀವನಾಂಶವಾದ 6.2 ಲಕ್ಷ ರೂ.ಯನ್ನು ಮೃತ ಮಹಿಳೆಯ ತಾಯಿಗೆ ನೀಡಬೇಕು ಎಂದು ನಿರ್ದೇಶನ ನೀಡಿದೆ.
ಜೀವನಾಂಶ ಎಂಬುದು ಮೃತ ಮಹಿಳೆಯ ವೈಯಕ್ತಿಕ ಹಕ್ಕು. ಆಕೆಯ ಸಾವಿನೊಂದಿಗೆ ಆ ಹಕ್ಕು ನಾಶವಾಗುತ್ತದೆ ಎಂಬುದು ಅರ್ಜಿದಾರರ ವಾದವಾಗಿತ್ತು. ವಿಚ್ಚೇದಿತ ಪತ್ನಿ ಸಾವನ್ನಪ್ಪಿದ ನಂತರ ಆಕೆಗೆ ಸೇರಿದ ಜೀವನಾಂಶ ಪಡೆಯುವ ಹಕ್ಕು ನಾಶವಾಗುವುದರಿಂದ ಆಕೆಯ ತಾಯಿಯು ಪ್ರಕರಣವನ್ನು ಮುಂದುವರಿಸಲು ಸಮರ್ಥರಲ್ಲ ಮತ್ತು ವಿಚ್ಚೇದಿತ ಮಹಿಳೆಯು ಮರಣದ ನಂತರ ಜೀವನಾಂಶ ಪಡೆಯುವ ಅರ್ಹತೆಯನ್ನು ಆಕೆಯ ತಾಯಿ ಹೊಂದಿಲ್ಲ ಎಂದು ವಾದಿಸಿದ್ದರು.
ಮಗಳ ಆಸ್ತಿಯಲ್ಲಿ ತಾಯಿಗೆ ಹಕ್ಕು ಇದೆ. ಸದ್ರಿ ಈ ಪ್ರಕರಣದಲ್ಲೂ ಪ್ರತಿವಾದಿ ತಾಯಿಯು ತನ್ನ ಮಗಳ ಮರಣದವರೆಗೆ ಬಾಕಿ ಇರುವ ಜೀವನಾಂಶಕ್ಕೆ ಅರ್ಹತೆ ಪಡೆಯುತ್ತಾರೆ ಎಂದು ಪ್ರತಿವಾದಿ ವಕೀಲರು ವಾದಿಸಿದ್ದರು. ಈ ವಾದವನ್ನು ಪುರಸ್ಕರಿಸಿದ ನ್ಯಾಯಪೀಠ, ಅರ್ಜಿದಾರರ ವಾದವನ್ನು ವಜಾಗೊಳಿಸಿದೆ.
ಪ್ರಕರಣ: ಅಣ್ಣಾದೊರೈ Vs ಜಯಾ (ಮದ್ರಾಸ್ ಹೈಕೋರ್ಟ್)