ಆಮ್ ಆದ್ಮಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ: ಚುನಾವಣಾ ಆಯೋಗಕ್ಕೆ ಗಡುವು ನೀಡಿದ ಕರ್ನಾಟಕ ಹೈಕೋರ್ಟ್
ಆಮ್ ಆದ್ಮಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ: ಚುನಾವಣಾ ಆಯೋಗಕ್ಕೆ ಗಡುವು ನೀಡಿದ ಕರ್ನಾಟಕ ಹೈಕೋರ್ಟ್
ಅರವಿಂದ ಕೇಜ್ರೀವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನ ಇದುವರೆಗೂ ಯಾಕೆ ನೀಡಿಲ್ಲ.. ನಿಮ್ಮದು ಸ್ವಾಯತ್ತ ಸಂಸ್ಥೆಯಲ್ಲವೇ..? ರಾಷ್ಟ್ರೀಯ ಪಕ್ಷದ ದರ್ಜೆಗಾಗಿ ಆಪ್ ಸಲ್ಲಿಸಿದ ಅರ್ಜಿಯನ್ನು ಎಪ್ರಿಲ್ 13ರೊಳಗೆ ಇತ್ಯರ್ಥ ಮಾಡಿ ಎಂದು ಕರ್ನಾಟಕ ಹೈಕೋರ್ಟ್ ಚುನಾವಣಾ ಆಯೋಗಕ್ಕೆ ತಾಕೀತು ಮಾಡಿದೆ.
ನ್ಯಾ. ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ಮಾಡಿದೆ. ತಾನು ರಾಷ್ಟ್ರೀಯ ಪಕ್ಷ ಎಂದು ಘೋಷಿಸಬೇಕು ಎಂದು ಸಲ್ಲಿಸಿದ್ದ ಅರ್ಜಿಯನ್ನು ಚುನಾವಣಾ ಆಯೋಗವು ಇತ್ಯರ್ಥಪಡಿಸಿಲ್ಲ. ಈ ಬಗ್ಗೆ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಆಮ್ ಆದ್ಮಿ ಪಕ್ಷ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿತ್ತು
ದೆಹಲಿ ಮತ್ತು ಪಂಜಾಬ್ ರಾಜ್ಯಗಳಲ್ಲಿ ಪಕ್ಷ ಅಧಿಕಾರದಲ್ಲಿ ಇದ್ದು, ಗೋವಾ ಮತ್ತು ಗುಜರಾತ್ ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ ಆರು ಶೇಕಡಾ ಮತಕ್ಕಿಂತ ಹೆಚ್ಚಿನ ಮತಗಳಿಕೆ ಮಾಡಿದೆ.
ಪ್ರಸ್ತುತ ಊರ್ಜಿತದಲ್ಲಿ ಇರುವ ಕಾನೂನಿನ ಪ್ರಕಾರ ನಾಲ್ಕು ಅಥವಾ ಹೆಚ್ಚು ರಾಜ್ಯಗಳಲ್ಲಿ ಆರು ಶೇಕಡಾಕ್ಕಿಂತ ಹೆಚ್ಚಿನ ಮತಗಳಿಕೆ ಮಾಡಿದ್ದರೆ ಆ ರಾಜಕೀಯ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ದೊರೆಯುತ್ತದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ತಕ್ಷಣ ಪಕ್ಷಕ್ಕೆ ರಾಷ್ಟ್ರೀಯ ಪಕ್ಷದ ದರ್ಜೆ ನೀಡಬೇಕು ಮತ್ತು ಸೂಕ್ತ ಸ್ಥಾನಮಾನ, ಪ್ರಚಾರದ ಅವಧಿ, ಮಾನ್ಯತೆ ನೀಡಬೇಕು ಎಂದು ಆಪ್ ಪರ ವಕೀಲರು ನ್ಯಾಯಪೀಠದ ಮುಂದೆ ವಾದಿಸಿದರು.
ಪ್ರಕರಣ: ಆಮ್ ಆದ್ಮಿ ಪಾರ್ಟಿ Vs ಭಾರತೀಯ ಚುನಾವಣಾ ಆಯೋಗ (ಕರ್ನಾಟಕ ಹೈಕೋರ್ಟ್)