ಅಧಿಕಾರಿಯ ಮೊಬೈಲ್‌ಗೆ ಪ್ರತಿಭಟನಾ ಸಂದೇಶ ಕಳಿಸಿದರೆ ಕೇಸು ಹಾಕುವಂತಿಲ್ಲ: ಹೈಕೋರ್ಟ್
ಅಧಿಕಾರಿಯ ಮೊಬೈಲ್‌ಗೆ ಪ್ರತಿಭಟನಾ ಸಂದೇಶ ಕಳಿಸಿದರೆ ಕೇಸು ಹಾಕುವಂತಿಲ್ಲ: ಹೈಕೋರ್ಟ್
ಯಾವುದೇ ಅಧಿಕಾರಿಯ ಮೊಬೈಲ್ ನಂಬರ್‌ಗೆ ನಾಗರಿಕರು ಪ್ರತಿಭಟನಾ ಸಂದೇಶ ಕಳಿಸಿದರೆ ಅವರ ವಿರುದ್ಧ ಕೇಸು ದಾಖಲಿಸಲಾಗದು ಎಂದು ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ತನ್ನ ಮೊಬೈಲ್ ಫೋನ್‌ನಿಂದ ಅಧಿಕಾರಿಗೆ ಸಂದೇಶ ಕಳುಹಿಸಿ ಆ ಮೂಲಕ ಪ್ರತಿಭಟಿಸುವ ಹಕ್ಕು ಚಲಾಯಿಸಿರುವ ನಾಗರಿಕರೊಬ್ಬರ ವಿರುದ್ಧ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಿಸುವಂತಿಲ್ಲ ಎಂದು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.
ನ್ಯಾ. ಸುನಿಲ್ ಶುಕ್ರೆ ಮತ್ತು ಎಂ.ಎಂ. ಸಥಾಯೆ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದ್ದು, ಮುಂಬೈ ಮೆಟ್ರೋ ರೈಲು ನಿಗಮದ ಆಗಿನ ವ್ಯವಸ್ಥಾಪಕ ನಿರ್ದೇಶಕಿ ಅಶ್ವಿನಿ ಭಿಡೆ ಅವರಿಗೆ ಸಂದೇಶ ಕಳುಹಿಸಿದ ಅವಿಜಿತ್ ಮೈಖೆಲ್ ವಿರುದ್ಧ ದಾಖಲಿಸಿದ್ದ ಎಫ್‌ಐಆರ್‌ನ್ನು ನ್ಯಾಯಪೀಠ ರದ್ದುಪಡಿಸಿತು.
ಸಂದೇಶದಲ್ಲಿ ಯಾವುದೇ ಆಕ್ಷೇಪಾರ್ಹ ವಿಚಾರವಾಗಲೀ ಅಶ್ಲೀಲತೆಯಾಗಲೀ ಇರಲಿಲ್ಲ. ದೇಶದ ಪ್ರಜೆ ತನ್ನ ದೃಷ್ಟಿಕೋನ ಮಂಡಿಸುವ ಅಥವಾ ಆಕ್ಷೇಪ ವ್ಯಕ್ತಪಡಿಸುವ, ಪ್ರತಿಭಟಿಸುವ ಇಲ್ಲವೇ ಮನವೊಲಿಸುವ, ಒತ್ತಾಯಿಸುವ ಪ್ರಜಾಸತ್ತಾತ್ಮಕ ಹಕ್ಕನ್ನು ಚಲಾಯಿಸಿ ಈ ಸಂದೇಶ ಕಳುಹಿಸಿದ್ದಾರೆ.
ಪ್ರಸ್ತುತ ಅರ್ಜಿದಾರನ ವಿರುದ್ಧ ದಾಖಲಾಗಿರುವ ರೀತಿಯ ಕ್ರಿಮಿನಲ್ ಮೊಕದ್ದಮೆಯನ್ನು ಯಾರ ವಿರುದ್ಧವಾದರೂ ದಾಖಲಿಸಿದರೆ ಅದು ಈ ದೇಶದ ಪ್ರಜೆಗಳ ಹಕ್ಕುಗಳ ಮೇಲಿನ ಅಕ್ರಮಣಕ್ಕೆ ಕಾರಣವಾಗಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಸದ್ರಿ ಪ್ರಕರಣದಲ್ಲಿ ಸಂದೇಶದಲ್ಲಿ ಅರ್ಜಿದಾರರು ಕಳಿಸಿದ ಸಂದೇಶದಿಂದ ತಾನು ಆಘಾತಗೊಂಡಿದ್ದೇನೆ, ಮನನೊಂದಿದ್ದೇನೆ, ಅಡಚಣೆಯಾಗಿದೆ ಎಂದು ದೂರುದಾರರು ಹೇಳಿಕೊಂಡಿದ್ದರು. ಆದರೆ, ಆಕೆ ಯಾವುದೇ ದೂರು ನೀಡಿರಲಿಲ್ಲ. ಖಾಸಗಿ ವ್ಯಕ್ತಿಯ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಪ್ರಕರಣ: ಅವಿಜಿತ್ ಮೈಕೆಲ್ ಮತ್ತು ಮಹಾರಾಷ್ಟ ಸರ್ಕಾರ (ಬಾಂಬೆ ಹೈಕೋರ್ಟ್)
...