ಹೈಕೋರ್ಟ್ ಆದೇಶಕ್ಕೆ ತುರ್ತು ತಡೆ: ಅಸಮರ್ಪಕ, ನ್ಯಾಯಾಂಗ ಶಿಸ್ತಿನ ಉಲ್ಲಂಘನೆ ಎಂದ ಸುಪ್ರೀಂ ಕೋರ್ಟ್
ಹೈಕೋರ್ಟ್ ಆದೇಶಕ್ಕೆ ತುರ್ತು ತಡೆ: ಅಸಮರ್ಪಕ, ನ್ಯಾಯಾಂಗ ಶಿಸ್ತಿನ ಉಲ್ಲಂಘನೆ ಎಂದ ಸುಪ್ರೀಂ ಕೋರ್ಟ್
ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕೊಲ್ಕತ್ತಾ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಹೈಕೋರ್ಟ್ ಆದೇಶವು ಅಸಮರ್ಪಕ ಹಾಗೂ ನ್ಯಾಯಾಂಗ ಶಿಸ್ತಿಗೆ ವಿರುದ್ಧವಾಗಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಸುದ್ದಿವಾಹಿನಿಗೆ ಸಂದರ್ಶನ ನೀಡಿದ್ದ ಕೊಲ್ಕೊತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರ ಸಂದರ್ಶನದ ವರದಿ ಮತ್ತು ಆದೇಶದ ಪ್ರತಿಯನ್ನು ರಾತ್ರಿ 12-15ರೊಳಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೆಕ್ರೆಟರಿ ಜನರಲ್‌ಗೆ ಕೊಲ್ಕೊತ್ತಾ ಹೈಕೋರ್ಟ್ ನ್ಯಾ. ಗಂಗೋಪಾಧ್ಯಾಯ ನಿರ್ದೇಶನ ನೀಡಿದ್ದರು.
ಈ ಆದೇಶ ಪ್ರಕಟವಾದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ನ್ಯಾ. ಎ.ಎಸ್. ಬೋಪಣ್ಣ ಮತ್ತು ಹಿಮಾ ಕೊಹ್ಲಿ ನೇತೃತ್ವದ ನ್ಯಾಯಪೀಠ ತುರ್ತು ವಿಚಾರಣೆ ನಡೆಸಿ ಈ ಆದೇಶಕ್ಕೆ ತಡೆ ನೀಡಿದ್ದಾರೆ. ಕೊಲ್ಕೊತ್ತಾ ಹೈಕೋರ್ಟ್‌ನ ಈ ಆದೇಶವು ಅಸಮರ್ಪಕ ಹಾಗೂ ನ್ಯಾಯಾಂಗ ಶಿಸ್ತಿಗೆ ವಿರುದ್ಧವಾಗಿದೆ ಎಂದು ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರ:
ಪಶ್ಚಿಮ ಬಂಗಾಳದ ಪ್ರಾಥಮಿಕ ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ವಿಚಾರಣೆಯನ್ನು ಕೊಲ್ಕೊತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ನಡೆಸುತ್ತಿದ್ದರು. ವಿಚಾರಣೆ ಹಂತದಲ್ಲೇ ಅವರು ಈ ಕುರಿತು ಖಾಸಗಿ ವಾಹಿನಿಗೆ ಸಂದರ್ಶನ ನೀಡಿದ್ದರು.
ಈ ಸಂದರ್ಶನವನ್ನು ಪ್ರಶ್ನಿಸಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಸಿಜೆಐ ಡಿ.ವೈ. ಚಂದ್ರಚೂಡ್ ಅವರಿದ್ದ ನ್ಯಾಯಪೀಠ, ಸಂದರ್ಶನ ನೀಡುವುದು ನ್ಯಾಯಾಧೀಶರ ಕೆಲಸವಲ್ಲ. ಅರ್ಜಿದಾರರ ಬಗ್ಗೆ ನ್ಯಾಯಾಧೀಶರು ಅಭಿಪ್ರಾಯ ನೀಡಿದರೆ ಅವರು ಆ ಪ್ರಕರಣದ ವಿಚಾರಣೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿ ಹೊಸ ಪೀಠ ರಚಿಸುವಂತೆ ಹೈಕೋರ್ಟ್ ಸಿಜೆಯವರಿಗೆ ಸೂಚನೆ ನೀಡಿದ್ದರು.
ಈ ಆದೇಶದ ಬೆನ್ನಲ್ಲೇ ಕೊಲ್ಕೊತ್ತಾ ಹೈಕೋರ್ಟ್ ನ್ಯಾಯಮೂರ್ತಿ ಅಭಿಜಿತ್ ಗಂಗೋಪಾಧ್ಯಾಯ ಅವರು ಮತ್ತೊಂದು ಆದೇಶ ಮಾಡಿ, ರಾತ್ರಿ 12 ಗಂಟೆಯೊಳಗೆ ತಾನು ನೀಡಿದ್ದ ಸಂದರ್ಶನದ ವರದಿ ಹಾಗೂ ಸುಪ್ರೀಂ ಕೋರ್ಟ್ ಆದೇಶವನ್ನು ತನ್ನ ಚೇಂಬರ್‌ಗೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೆಕ್ರಟರಿ ಜನರಲ್‌ಗೆ ನಿರ್ದೇಶಿಸಿದ್ದರು.
ರಾತ್ರಿ 12-15ರ ವರೆಗೆ ನಾನು ಚೇಂಬರ್‌ನಲ್ಲಿ ಕಾಯುತ್ತೇನೆ. ಶಿಕ್ಷಕರ ನೇಮಕಾತಿ ಪ್ರಕರಣದ ವಿಚಾರಣೆಯಿಂದ ನನ್ನನ್ನು ತೆಗೆದುಹಾಕಲು ಕಾರಣವಾದ ದಾಖಲೆಗಳನ್ನು ತನ್ನ ಮುಂದೆ ಸಲ್ಲಿಸುವಂತೆ ಅವರು ಆದೇಶ ನೀಡಿದ್ದರು.
ಇದು ಸುಪ್ರೀಂಕೋರ್ಟ್ ಕೆಂಗಣ್ಣಿಗೆ ಗುರಿಯಾಗಿದ್ದು, ಇದೊಂದು ನ್ಯಾಯಾಂಗ ಅಶಿಸ್ತು ಹಾಗೂ ಅಸಮರ್ಪಕವಾದ ಆದೇಶವಾಗಿದೆ ಎಂದು ಹೇಳಿ ಹೈಕೋರ್ಟ್ ಆದೇಶಕ್ಕೆ ತಡೆ ನೀಡಿದೆ.