ಸಿವಿಲ್ ನ್ಯಾಯಾಧೀಶರ ವಜಾಗೊಳಿಸಿದ ಕ್ರಮ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಸಿವಿಲ್ ನ್ಯಾಯಾಧೀಶರ ವಜಾಗೊಳಿಸಿದ ಕ್ರಮ ಎತ್ತಿ ಹಿಡಿದ ಸುಪ್ರೀಂ ಕೋರ್ಟ್
ಪೂರ್ಣ ತೀರ್ಪು ಸಿದ್ಧಪಡಿಸದೆ ಭಾಗಶಃ ತೀರ್ಪು ಘೋಷಣೆ
ಸಿವಿಲ್ ನ್ಯಾಯಾಧೀಶರ ಕ್ರಮ ಅನಪೇಕ್ಷಿತ ನಡವಳಿಕೆ ಎಂದ ನ್ಯಾಯಪೀಠ
ಪೂರ್ಣ ಪ್ರಮಾಣದ ತೀರ್ಪು ಸಿದ್ಧಪಡಿಸದೆ ಬಹಿರಂಗ ನ್ಯಾಯಾಲಯದಲ್ಲಿ ತೀರ್ಪಿನ ಕೊನೆಯ ಭಾಗವನ್ನು ಘೋಷಣೆ ಮಾಡುವಂತಿಲ್ಲ. ಇದು ನ್ಯಾಯಾಧೀಶರ ಅನಪೇಕ್ಷಿತ ನಡವಳಿಕೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ಕರ್ನಾಟಕ ಮೂಲದ ಸಿವಿಲ್ ನ್ಯಾಯಾಧೀಶರ ವಜಾ ಆದೇಶವನ್ನು ಎತ್ತಿಹಿಡಿದಿದೆ.
ಈ ಮೂಲಕ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಆದೇಶವನ್ನು ಬದಿಗೆ ಸರಿಸಿದೆ. ನ್ಯಾ. ರಾಮ ಸುಬ್ರಹ್ಮಣ್ಯನ್ ಮತ್ತು ನ್ಯಾ. ಪಂಕಜ್ ಮಿತ್ತಲ್ ನೇತೃತ್ವದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರಾಗಿದ್ದ ಪ್ರತಿವಾದಿಯವರು ಪೂರ್ಣ ಪ್ರಮಾಣದ ತೀರ್ಪನ್ನು ಸಿದ್ದಪಡಿಸದೇ ಬಹಿರಂಗ ನ್ಯಾಯಾಲಯದಲ್ಲಿ ತೀರ್ಪಿನ ಆಪರೇಟಿವ್ ಭಾಗವನ್ನು ಓದಿ ಹೇಳಿದ್ದರು. ಆ ಬಳಿಕ ತೀರ್ಪಿನ ಉಳಿದ ಪೂರ್ಣ ಭಾಗವನ್ನು ಸಿದ್ದಪಡಿಸಲಾಯಿತು. ಈ ಬಗ್ಗೆ ಇಲಾಖಾ ವಿಚಾರಣೆ ನಡೆದು, ಪ್ರತಿವಾದಿ ನ್ಯಾಯಾಧೀಶರು ತಪ್ಪಿತಸ್ಥರು ಎಂದು ಸಾಬೀತಾಗಿತ್ತು.
ಇಂತಹದ್ದೇ ಇನ್ನು ಕೆಲವು ಸನ್ನಿವೇಶಗಳಲ್ಲಿ ಬಹಿರಂಗ ನ್ಯಾಯಾಲಯದಲ್ಲಿ ಉದ್ಧರಿಸಲಾದ ತೀರ್ಪು ಪ್ರತಿಗಳಿಗೆ ನ್ಯಾಯಾಧೀಶರ ಸಹಿ ಇರಲಿಲ್ಲ.
ಹೈಕೋರ್ಟ್‌ನ ವಿಭಾಗೀಯ ಪೀಠ ತನ್ನ ಆದೇಶದಲ್ಲಿ ಎಲ್ಲ ಇಲಾಖಾ ವಿಚಾರಣೆಗಳ ತನಿಖೆಗಳನ್ನು ರದ್ದುಗೊಳಿಸಿತ್ತು. ಅಲ್ಲದೆ, ಮುಂದುವರಿದ ತನಿಖೆ ನಡೆಸುವಂತಿಲ್ಲ ಎಂದು ಆದೇಶ ನೀಡಿತ್ತು. ಕಿರಿಯ ವಿಭಾಗದ ಸಿವಿಲ್ ನ್ಯಾಯಾಧೀಶರನ್ನು ಸೇವೆಯಲ್ಲಿ ಮುಂದುವರಿಯಲು ಅನುಮತಿ ನೀಡಿದ್ದಲ್ಲದೆ, ಅವರಿಗೆ ಸಿಗಬೇಕಾಗಿದ್ದ ಎಲ್ಲ ಸವಲತ್ತುಗಳನ್ನು ನೀಡುವಂತೆ ಮೂರು ತಿಂಗಳ ಕಾಲಮಿತಿಯೊಳಗೆ ಜಾರಿಗೆ ಬರುವಂತೆ ಆದೇಶ ಹೊರಡಿಸಿತ್ತು.
ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ತೀರ್ಪನ್ನು ಬದಿಗೆ ಸರಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, ನ್ಯಾಯಾಧೀಶರ ಅನಪೇಕ್ಷಿತ ನಡವಳಿಕೆ ಸಾಬೀತಾಗಿದ್ದು, ಅವರು ನ್ಯಾಯಾಧೀಶರಾಗಿರಲು ಯೋಗ್ಯರಲ್ಲ ಎಂಬ ಕಾರಣಕ್ಕೆ ವಜಾಗೊಳಿಸಿದ ಆದೇಶವನ್ನು ಎತ್ತಿಹಿಡಿಯಿತು.
ಪ್ರಕರಣ: ರಿಜಿಸ್ಟ್ರಾರ್ ಜನರಲ್, ಕರ್ನಾಟಕ ಹೈಕೋರ್ಟ್ Vs ಎಂ. ನರಸಿಂಹ ಪ್ರಸಾದ್
ಸುಪ್ರೀಂ ಕೋರ್ಟ್ Dated 10-04-2023