ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಜಯನಗರದಿಂದ ಸ್ಪರ್ಧೆ!?
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಜಯನಗರದಿಂದ ಸ್ಪರ್ಧೆ!?
ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಬಿಜೆಪಿ ಅಭ್ಯರ್ಥಿಯಾಗಿ ಜಯನಗರದಿಂದ ಸ್ಪರ್ಧೆ ನಡೆಸಲು ಸಜ್ಜಾಗಿದ್ದಾರೆ. ಈಗಾಗಲೇ ಕ್ಷೇತ್ರಾದ್ಯಂತ ಮಿಂಚಿನ ಸಂಚಾರ ನಡೆಸಿರುವ ವಿವೇಕ್ ಸುಬ್ಬಾರೆಡ್ಡಿ ಮತ್ತು ಅವರ ಅಭಿಮಾನಿ ಬಳಗ ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯವನ್ನು ಮುಗಿಸಿದೆ.
ರಾಜ್ಯ ಬಿಜೆಪಿಯ ಕಾರ್ಯಕಾರಿಣಿ ಸದಸ್ಯರೂ ಆಗಿರುವ ಹೈಕೋರ್ಟ್‌ನ ಹಿರಿಯ ವಕೀಲ ವಿವೇಕ್ ಸುಬ್ಬಾರೆಡ್ಡಿ ಉತ್ತಮ ನಡವಳಿಕೆ, ನೇರ ನಡೆ ನುಡಿಗೆ ಹೆಸರುವಾಸಿಯಾಗಿದ್ದಾರೆ. ತಮ್ಮ ಬಳಗದಲ್ಲಿ ಡೈನಾಮಿಕ್ ಹೀರೋ ಎಂಬ ಪದನಾಮವನ್ನು ಹೊಂದಿರುವ ವಿವೇಕ್ ಸುಬ್ಬಾರೆಡ್ಡಿ ಅವರು ಬಿಜೆಪಿ ಟಿಕೆಟ್ ದೊರೆಯುವ ನಿರೀಕ್ಷೆಯಲ್ಲಿ ಇದ್ದಾರೆ.
ಸಂಘಟನಾ ಚತುರರೂ ಆಗಿರುವ ವಿವೇಕ್ ಸುಬ್ಬಾರೆಡ್ಡಿ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ವಕೀಲ ಸಮುದಾಯದ ಎಲ್ಲ ಬೇಡಿಕೆಗಳನ್ನು ಸಮರ್ಥವಾಗಿ ನ್ಯಾಯಾಂಗದ ಮುಂದಿಟ್ಟವರು. ವಕೀಲರ ರಕ್ಷಣಾ ಕಾಯ್ದೆಯ ಜಾರಿಗೆ ಆಗ್ರಹಿಸಿ ರಾಜ್ಯಾದ್ಯಂತ ನಡೆದ ಹೋರಾಟಕ್ಕೆ ವಿವೇಕ್ ಮುನ್ನುಡಿ ಬರೆದವರು.
ವಕೀಲರ ಮೇಲೆ ದಾಳಿ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆದಾಗ ತಕ್ಷಣ ಮಧ್ಯಪ್ರವೇಶ ಮಾಡಿರುವ ವಕೀಲರ ಸಮುದಾಯದ ಹೆಮ್ಮೆಯ ನಾಯಕ ವಿವೇಕ್ ಚುನಾವಣಾ ಪ್ರಚಾರಕ್ಕೆ ಈಗಾಗಲೇ ಭರದ ತಯಾರಿ ನಡೆಸಿದ್ದಾರೆ.
ಕ್ಷೇತ್ರದ ಉದ್ದಗಲಕ್ಕೂ ಸಂಚರಿಸಿರುವ ಅವರು ಜಯನಗರ ಕ್ಷೇತ್ರದ ನೆಚ್ಚಿನ ಮುಂದಾಳು ಕೂಡ ಆಗಿದ್ದಾರೆ. 28 ವರ್ಷಗಳು ನ್ಯಾಯವಾದಿಯಾಗಿ ಸೇವೆ ಸಲ್ಲಿಸಿರುವ ವಿವೇಕ್ ಅವರ ತಂದೆ ಸುಬ್ಬಾರೆಡ್ಡಿ ಅವರೂ ಶಾಸಕರಾಗಿದ್ದವರು ಎಂಬುದು ಉಲ್ಲೇಖನೀಯ.