ಪ್ರತಿಭಟನೆ ಮಾಡಿದ್ರೆ ಹುಷಾರ್! ಶೀಘ್ರದಲ್ಲೇ ಜಾರಿಗೆ ಬರಲಿದೆ ವಕೀಲರ ವಿರುದ್ಧ ಶಿಸ್ತುಕ್ರಮದ ನಿಯಮ!
ಪ್ರತಿಭಟನೆ ಮಾಡಿದ್ರೆ ಹುಷಾರ್! ಶೀಘ್ರದಲ್ಲೇ ಜಾರಿಗೆ ಬರಲಿದೆ ವಕೀಲರ ವಿರುದ್ಧ ಶಿಸ್ತುಕ್ರಮದ ನಿಯಮ!
ಪ್ರತಿಭಟನಾ ನಿರತ ವಕೀಲರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಂಬಂಧ ಶೀಘ್ರದಲ್ಲೇ ನೂತನ ನಿಯಮ ಜಾರಿಗೆ ಬರಲಿದೆ. ಈ ಬಗ್ಗೆ ದೇಶಾದ್ಯಂತ ಇರುವ ರಾಜ್ಯ ವಕೀಲರ ಪರಿಷತ್ತಿನ ಪದಾಧಿಕಾರಿಗಳು ಕಳೆದ ವಾರ ಸಭೆ ಸೇರಿದ್ದು, ಕೆಲವೇ ದಿನಗಳಲ್ಲಿ ಹೊಸ ನಿಯಮ ವಕೀಲರ ಶಿಸ್ತುಕ್ರಮಕ್ಕಾಗಿ ಅಸ್ತಿತ್ವಕ್ಕೆ ಬರಲಿದೆ.
ಸ್ವತಃ ಭಾರತೀಯ ವಕೀಲರ ಪರಿಷತ್ತು ಈ ವಿಷಯವನ್ನು ಸುಪ್ರೀಂ ಕೋರ್ಟ್ ನ್ಯಾಯಪೀಠಕ್ಕೆ ಮಾಹಿತಿ ನೀಡಿದೆ.
ಕೋರ್ಟ್ ಕಲಾಪಕ್ಕೆ ಬಹಿಷ್ಕಾರ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕಾಮನ್ ಕಾಸ್ ಎಂಬ ಸರ್ಕಾರೇತರ ಸಂಸ್ಥೆ ನ್ಯಾಯಾಂಗ ನಿಂದನಾ ಅರ್ಜಿಯನ್ನು ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾ. ದಿನೇಶ್ ಮಹೇಶ್ವರಿ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಭಾರತೀಯ ವಕೀಲರ ಪರಿಷತ್ತಿನ ಅಭಿಪ್ರಾಯ ಕೇಳಿತ್ತು.
ಇದಕ್ಕೆ ಉತ್ತರಿಸಿದ ಬಿಸಿಐ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ, ಒಂದು ವಾರದೊಳಗೆ ಈ ಬಗ್ಗೆ ನೂತನ ನಿಯಮಗಳನ್ನು ರೂಪಿಸಿ ವಕೀಲರ ವಿರುದ್ಧದ ಶಿಸ್ತುಕ್ರಮದ ನಿಯಮವನ್ನು ಅಳವಡಿಸಲಾಗುವುದು ಎಂದು ಭರವಸೆ ನೀಡಿದರು.
ವಕೀಲರು ಪ್ರತಿಭಟನೆ ಮಾಡುವುದನ್ನು ತಡೆಯಲು ಅಥವಾ ನಿಯಂತ್ರಿಸಲು ಸೂಕ್ತವಾದ ಯಾ ಸ್ಪಷ್ಟವಾದ ನಿಯಮ ರೂಪಿಸಲು ಭಾರತೀಯ ವಕೀಲರ ಸಂಘ ಹಿಂದೇಟು ಹಾಕುತ್ತಿದೆ ಎಂದು ಸುಪ್ರೀಂಕೋರ್ಟ್ ಈ ಹಿಂದೆ ಅಸಮಾಧಾನ ವ್ಯಕ್ತಪಡಿಸಿತ್ತು.
ಪ್ರತಿಭಟನಾ ನಿರತ ವಕೀಲರನ್ನು ನೇರವಾಗಿ ಶಿಕ್ಷಿಸುವುದನ್ನು ಬಿಟ್ಟು ತಮಗೆ ಅನ್ಯ ಯಾವುದೇ ಕಾನೂನು ಮಾರ್ಗ ಇಲ್ಲ ಎಂದು ನ್ಯಾಯಪೀಠ ಹೇಳಿತ್ತು.
ಈ ಹಿನ್ನೆಲೆಯಲ್ಲಿ ಭಾರತೀಯ ವಕೀಲರ ಸಂಘ(BCI) ದೇಶದ ವಿವಿಧ ರಾಜ್ಯ ವಕೀಲರ ಪರಿಷತ್ತು ಪದಾಧಿಕಾರಿಗಳ ಸಭೆ ಕರೆದು ಈ ಬಗ್ಗೆ ಚರ್ಚೆ ನಡೆಸಿತ್ತು.
ಪ್ರಕರಣ: ಕಾಮನ್ ಕಾಸ್ Vs ಅಭಿಜಿತ್ ಮತ್ತಿತರರು (ಸುಪ್ರೀಂ ಕೋರ್ಟ್)