ವಕೀಲರ ಸಂರಕ್ಷಣಾ ಕಾಯ್ದೆ: ಸುವರ್ಣ ಕಾಲ ಬಂದಿದೆ.. ಹೊಸ ಸರ್ಕಾರದ ಮೇಲಿದೆ ನಿರೀಕ್ಷೆ
ವಕೀಲರ ಸಂರಕ್ಷಣಾ ಕಾಯ್ದೆ: ಸುವರ್ಣ ಕಾಲ ಬಂದಿದೆ.. ಹೊಸ ಸರ್ಕಾರದ ಮೇಲಿದೆ ನಿರೀಕ್ಷೆ
ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ಬರಬೇಕು, ಕರ್ತವ್ಯನಿರತ ವಕೀಲರಿಗೆ ಸಂರಕ್ಷಣೆ ಸಿಗಬೇಕು ಎಂಬುದು ವಕೀಲರ ಬಹುದಿನಗಳ ಬೇಡಿಕೆ. ಈ ಬೇಡಿಕೆಯನ್ನು ಮುಂದಿಟ್ಟು ವಕೀಲರು ಪಾದಯಾತ್ರೆ ನಡೆಸಿದ್ದು, ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ವಿಧಾನಸಭೆಗೆ ಮುತ್ತಿಗೆ ಹಾಕಿರುವುದು ಈಗ ಇತಿಹಾಸ.
ಆ ಹೋರಾಟಕ್ಕೆ ಆಗಿನ ಸರ್ಕಾರದ ಸಚಿವರು ಆಗಮಿಸಿ ಭರವಸೆ ನೀಡಿದ್ದರು. ಆದರೆ, ಆಗಿನ ಕಾನೂನು ಸಚಿವರ ಹಠಮಾರಿ ಧೋರಣೆಯಿಂದ ಮುಖ್ಯಮಂತ್ರಿಗಳು ಒಲವು ತೋರಿದ್ದರೂ ಕಾಯ್ದೆ ಕಾರ್ಯರೂಪಕ್ಕೆ ಬರಲಿಲ್ಲ ಎಂಬುದೂ ಎಲ್ಲರಿಗೆ ಗೊತ್ತಿದ್ದದ್ದೇ..
ಈಗ ಸ್ವತಃ ವಕೀಲರೂ ಕಾನೂನು ಪಂಡಿತರೂ ಅಗಿರುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ಧಾರೆ. ಅಂದು, ಬಿಜೆಪಿ ಸರ್ಕಾರ ಇದ್ದಾಗ ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ವಕೀಲರ ಸಂರಕ್ಷಣಾ ಕಾಯ್ದೆ ಪರ ಬ್ಯಾಟಿಂಗ್ ಮಾಡಿದ್ದರು. ದಾಳಿ, ಹಲ್ಲೆಗಳಿಂದ ವಕೀಲರ ಸಂರಕ್ಷಣೆ ಮಾಡಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು.
ಈಗ ಅವರೇ ಸಿಎಂ ಕುರ್ಚಿಯಲ್ಲಿ ವಿರಾಜಮಾನರಾಗಿದ್ದಾರೆ. ಜೊತೆಗೆ, ಆಳವಾದ ಅಧ್ಯಯನ ಮಾಡಿರುವ ಹಿರಿಯ ರಾಜಕಾರಣಿ ಎಚ್.ಕೆ. ಪಾಟೀಲರು ಕಾನೂನು ಸಚಿವರಾಗಿದ್ದಾರೆ.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮತ್ತು ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ನೂತನ ಸರ್ಕಾರಕ್ಕೆ ಒತ್ತಡ ಹಾಕಿ, ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸಲು ಪ್ರಯತ್ನ ಮಾಡಬೇಕು ಎಂಬುದು ವಕೀಲರ ಸಮುದಾಯದ ಒತ್ತಾಸೆಯಾಗಿದೆ.
ವಕೀಲರ ಸಂರಕ್ಷಣಾ ಕಾಯ್ದೆಯ ಜಾರಿಗೆ ಸುವರ್ಣ ಕಾಲ ಇದೀಗ ಬಂದಿದೆ. ಮನವಿ, ಒತ್ತಡ, ಹಕ್ಕೊತ್ತಾಯ ಮಾಡಿದರೆ ಕಾಯ್ದೆ ಜಾರಿಗೆ ಬರುವ ದಿನ ದೂರವಿಲ್ಲ.
.