ವಕೀಲರ ಸಂರಕ್ಷಣಾ ಕಾಯ್ದೆ: ನನಸಾಗಲಿದೆ ವಕೀಲರ ಬಹುದಿನಗಳ ಕನಸು!
ವಕೀಲರ ಸಂರಕ್ಷಣಾ ಕಾಯ್ದೆ: ನನಸಾಗಲಿದೆ ವಕೀಲರ ಬಹುದಿನಗಳ ಕನಸು!
ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಲು ಬದ್ಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಕೀಲರ ಸಮುದಾಯಕ್ಕೆ ಭರವಸೆ ನೀಡಿದ್ದಾರೆ. ಬೆಂಗಳೂರು ವಕೀಲರ ಸಂಘದ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ನ್ಯಾ. ಬಿ. ವೀರಪ್ಪ ಅವರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ವಕೀಲರ ಸಮುದಾಯ ಈ ಬಗ್ಗೆ ಹೋರಾಟ ನಡೆಸಿತ್ತು. ಬೆಳಗಾವಿಗೆ ಪಾದಯಾತ್ರೆಯನ್ನೂ ಆಯೋಜಿಸಿತ್ತು. ಆಗ ನಾನು ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ವಿಧಾನಸಭೆಯಲ್ಲಿ ವಕೀಲರ ಪರ ಧ್ವನಿ ಎತ್ತಿದ್ದೆ. ಈಗ ನಾವೇ ಅಧಿಕಾರಕ್ಕೆ ಬಂದಿದ್ದೇವೆ. ಈ ಕಾಯ್ದೆಯನ್ನು ಜಾರಿಗೆ ತರಲು ಬದ್ಧವಾಗಿದ್ದೇವೆ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕಳೆದ ಬೆಳಗಾವಿ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಶೀಘ್ರದಲ್ಲೇ ಜಾರಿಗೆ ತರುತ್ತೇವೆ ಎಂದು ಆರ್. ಅಶೋಕ್ ವಕೀಲರ ಸಮುದಾಯದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕವಾಗಿ ಭರವಸೆ ನೀಡಿದ್ದರು.
ಆದರೆ, ಆಗಿನ ಕಾನೂನು ಸಚಿವರು ಮತ್ತು ಇತರ ಕೆಲ ಪ್ರಭಾವಿಗಳ ಒತ್ತಡದಿಂದ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಯಾಗಲೇ ಇಲ್ಲ. ಈಗ ಈ ಕಾಯ್ದೆ ಜಾರಿಗೆ ಸಿದ್ದರಾಮಯ್ಯ ಸರ್ಕಾರ ಮುಂದಾಗಿರುವುದು ವಕೀಲರ ಸಮುದಾಯಕ್ಕೆ ಸಂತಸ ತಂದಿದೆ.
ವಿಮಾ ಯೋಜನೆ ಜಾರಿಗೂ ಸಿಎಂ ಸ್ಪಂದನೆ
ಇದೇ ವೇಳೆ, ವಕೀಲರಿಗೆ ವಿಮಾ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಸೂಕ್ತ ಕಾರ್ಯಕ್ರಮ ಹಾಕಿಕೊಳ್ಳಲಿದೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು. ವಿಮಾ ಯೋಜನೆಯನ್ನು ಜಾರಿಗೆ ತರುವ ವಿಚಾರದಲ್ಲಿ ಸಮಗ್ರವಾಗಿ ಚರ್ಚಿಸಲಾಗುವುದು. ಆ ಬಳಿಕ ವಿಮಾ ಯೋಜನೆಯನ್ನು ವಕೀಲ ಸಮುದಾಯದ ಒಳಿತಿಗಾಗಿ ಜಾರಿಗೆ ತರಲಾಗುವುದು ಎಂದು ಅವರು ಭರವಸೆ ನೀಡಿದರು.