ಸಾಮಾಜಿಕ ಜಾಲತಾಣದಲ್ಲಿ ಜಡ್ಜ್ ವಿರುದ್ಧ ಕ್ಷುಲ್ಲಕ ಆರೋಪ: 10 ದಿನದ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್!
ಸಾಮಾಜಿಕ ಜಾಲತಾಣದಲ್ಲಿ ಜಡ್ಜ್ ವಿರುದ್ಧ ಕ್ಷುಲ್ಲಕ ಆರೋಪ: 10 ದಿನದ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್!
ಸಾಮಾಜಿಕ ಜಾಲತಾಣದಲ್ಲಿ ಡಿಸ್ಟ್ರಿಕ್ಟ್ ಜಡ್ಜ್‌ವೊಬ್ಬರ ವಿರುದ್ಧ ಆಧಾರರಹಿತ ಆರೋಪ ಮಾಡಿದ್ದ ವ್ಯಕ್ತಿಗೆ ಮಧ್ಯಪ್ರದೇಶ ಹೈಕೋರ್ಟ್ 10 ದಿನಗಳ ಕಾಲ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.
ಕೃಷ್ಣಕುಮಾರ್ ರಘು ವಂಶಿ ಎಂಬವರು ಮಧ್ಯಪ್ರದೇಶದ ಜಿಲ್ಲಾ ನ್ಯಾಯಾಧೀಶರೊಬ್ಬರ ವಿರುದ್ದ ಭ್ರಷ್ಟಾಚಾರ ಆರೋಪ ಮಾಡಿದ್ದರು. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ ನ್ಯಾಯಾಂಗ ನಿಂದನೆ ಮಾಡಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ರವಿ ಮಳಿಮಠ ಮತ್ತು ನ್ಯಾ. ವಿಶಾಲ್ ಮಿಶ್ರಾ ಅವರಿದ್ದ ವಿಭಾಗೀಯ ನ್ಯಾಯಪೀಠ ಆರೋಪಿಯ ಅಪರಾಧ ಸಾಬೀತಾಗಿದೆ ಎಂದು ತೀರ್ಪು ನೀಡಿತು. ಅಲ್ಲದೆ, ಅಪರಾಧಿಗೆ 10 ದಿನಗಳ ಜೈಲು ಶಿಕ್ಷೆ ಹಾಗೂ ಎರಡು ಸಾವಿರ ರೂ.ಗಳ ದಂಡ ವಿಧಿಸಿದೆ.
ಪ್ರಕರಣ ಏನು..?
ದೇವಸ್ಥಾನದ ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ ಆದೇಶ ಹೊರಡಿಸಿದ್ದ ಜಿಲ್ಲಾ ನ್ಯಾಯಾಧೀಶರು, ಭಕ್ತರು ಕಾಣಿಕೆ ಹಾಕಿರುವ ದೇವಸ್ಥಾನದ ಹುಂಡಿಗೆ ಬೀಗ ಹಾಕುವಂತೆ ಹಾಗೂ ಭಕ್ತರು ನೀಡಿರುವ ದೇಣಿಗೆ ಹಣವನ್ನು ಟ್ರಸ್ಟ್ ಹೆಸರಿನಲ್ಲಿ ಠೇವಣಿ ಇರಿಸುವಂತೆ ನಿರ್ದೇಶನ ನೀಡಿದ್ದರು.
ಈ ಬಗ್ಗೆ ಅಸಮಾಧಾನಗೊಂಡ ಕೃಷ್ಣಕುಮಾರ್ ರಘುವಂಶಿ ಜಿಲ್ಲಾ ನ್ಯಾಯಾಧೀಶರ ವಿರುದ್ಧ ಭ್ರಷ್ಟಾಚಾರ ಮತ್ತು ಅಧಿಕಾರ ದುರುಪಯೋಗದ ಆರೋಪ ಮಾಡಿದ್ದರು. ಯಾವುದೇ ಆಧಾರ ಇಲ್ಲದೆ ಈ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದ್ದರು.
ಈ ವಿಚಾರವನ್ನು ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್ ಗಮನಕ್ಕೆ ತಂದರು. ಇದನ್ನು ಗಮನಿಸಿದ ಮಧ್ಯಪ್ರದೇಶ ಹೈಕೋರ್ಟ್, ರಘುವಂಶಿ ಅವರು ಮಾಡಿದ ಪೋಸ್ಟ್‌ಗಳನ್ನು ತರಿಸಿಕೊಂಡು ವರದಿ ತರಿಸಿಕೊಂಡಿತು.
ಮೇಲ್ನೋಟಕ್ಕೆ ನ್ಯಾಯಾಂಗ ನಿಂದನೆ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ವಿರುದ್ಧ ಸ್ವಯಂ ಪ್ರೇರಿತ ಅರ್ಜಿ ದಾಖಲಿಸಿಕೊಂಡು ವಿಭಾಗೀಯ ಪೀಠಕ್ಕೆ ವಿಚಾರಣೆ ನಡೆಸುವಂತೆ ನಿರ್ದೇಶನ ನೀಡಿತು.
.