ಜಿಲ್ಲಾಧಿಕಾರಿ ನೋಟೀಸನ್ನೇ ಪ್ರಶ್ನಿಸಿದ ಅಧಿಕಾರಿ: ಕರ್ತವ್ಯ ಲೋಪಕ್ಕೆ ಡಿಡಿಪಿಯು ತಲೆದಂಡ!?
ಜಿಲ್ಲಾಧಿಕಾರಿ ನೋಟೀಸನ್ನೇ ಪ್ರಶ್ನಿಸಿದ ಅಧಿಕಾರಿ: ಕರ್ತವ್ಯ ಲೋಪಕ್ಕೆ ಡಿಡಿಪಿಯು ತಲೆದಂಡ!?
ಜಿಲ್ಲಾ ಚುನಾವಣಾಧಿಕಾರಿಯೂ ಅಗಿರುವ ಜಿಲ್ಲಾಧಿಕಾರಿಯವರ ನೋಟೀಸನ್ನೇ ಪ್ರಶ್ನಿಸಿರುವ ಅಧಿಕಾರಿಯೊಬ್ಬರು ತಮಗೆ ನೋಟೀಸ್ ನೀಡಿದ ಜಿಲ್ಲಾಧಿಕಾರಿಯವರ ಕ್ರಮವನ್ನೇ ಪ್ರಶ್ನಿಸಿದ್ದಾರೆ.
ಕರ್ತವ್ಯ ಲೋಪ ಎಸಗಿದ ಈ ಅಧಿಕಾರಿಯನ್ನು ಅಮಾನತುಗೊಳೀಸಲಾಘಿದ್ದು, ಕರ್ತವ್ಯ ಲೋಪದ ವಿಚಾರಣೆಯ ಹೊಣೆಯನ್ನು ಪಾಲಿಕೆಯ ಆಯುಕ್ತರ ಹೆಗಲಿಗೆ ಹಾಕಲಾಗಿದೆ.
ಈ ಘಟನೆ ನಡೆದಿರುವುದು ದಕ್ಷಿಣ ಕನ್ನಡದಲ್ಲಿ. ಚುನಾವಣಾ ಕರ್ತವ್ಯ ಲೋಪದ ಕಾರಣಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಿ.ಡಿ. ಜಯಣ್ಣ ಅವರನ್ನು ಜಿಲ್ಲಾಧಿಕಾರಿ ಎಂ.ಆರ್. ರವಿಕುಮಾರ್ ಅಮಾನತು ಮಾಡಿದ್ದಾರೆ.
ಈ ಕುರಿತು ನೀಡಲಾದ ನೋಟೀಸ್‌ನಲ್ಲಿ ಪ್ರಸ್ತಾಪಿಸಲಾಗಿರುವ ಆರೋಪಗಳನ್ನು ಅಲ್ಲಗಳೆದಿರುವ ಜಯಣ್ಣ, ತಮಗೆ ಡಿಸಿಯವರು ನೋಟೀಸ್ ನೀಡಿದ ಕ್ರಮವನ್ನೇ ಪ್ರಶ್ನಿಸಿದ್ದಾರೆ.
ಮತದಾನಕ್ಕೆ ಮುನ್ನಾ ದಿನ, ಅಂದರೆ ಮೇ 9ರಂದು ದ.ಕ. ಜಿಲ್ಲಾಧಿಕಾರಿಯವರು ಪತ್ರಿಕಾಗೋಷ್ಠಿ ನಡೆಸಿದ್ದು, ಈ ವೇಳೆ ಹಾಜರಿರುವಂತೆ ಡಿಸಿ ಕಚೇರಿ ಸಿಬ್ಬಂದಿ ಜಯಣ್ಣ ಅವರಿಗೆ ಫೋನ್ ಮೂಲಕ ತಿಳಿಸಿದ್ದರು.
ಆದರೆ, ತಾನು ದ್ವಿತೀಯ ಪಿ.ಯು.ಸಿ. ಪರೀಕ್ಷೆಯ ದಾಖಲೆಗಳನ್ನು ಸಲ್ಲಿಸಲು ಬೆಂಗಳೂರಿಗೆ ತೆರಳುತ್ತಿದ್ದು, ತಮಗೆ ಪತ್ರಿಕಾಗೋಷ್ಠಿಯಲ್ಲಿ ಹಾಜರಾಗಲು ಸಾಧ್ಯವಿಲ್ಲ ಎಂದು ಜಯಣ್ಣ ತಮಗೆ ಕರೆ ಮಾಡಿದ ಡಿಸಿ ಕಚೇರಿ ಸಿಬ್ಬಂದಿಗೆ ತಿಳಿಸಿದ್ದರು.
ಚುನಾವಣೆಯ ಪ್ರಕ್ರಿಯೆ ನಡೆಯುತ್ತಿರುವ ಸಂದರ್ಭದಲ್ಲಿ ಜಿಲ್ಲಾ ಚುನಾವಣಾಧಿಕಾರಿಯ ಅನುಮತಿ ಪಡೆಯದೆ ಜಿಲ್ಲಾ ಕೇಂದ್ರ ಬಿಟ್ಟು ಹೋಗಬಾರದು. ಈ ನಿಯಮವನ್ನು ಉಲ್ಲಂಘಿಸಿದ ಜಯಣ್ಣ ಈ ಮೂಲಕ ಕರ್ತವ್ಯ ಲೋಪ ಎಸಗಿದ್ದಾರೆ ಎಂಬುದು ಅವರ ಮೇಲಿನ ಆರೋಪ.
ಜಯಣ್ಣ ಅವರ ಗೈರು ಹಾಜರಿಯಿಂದ ಮಸ್ಟರಿಂಗ್ ಕೆಲಸ ವಿಳಂಬವಾಯಿತು. ಇದರಿಂದ ಚುನಾವಣಾ ಸಿಬ್ಬಂದಿ ಪಿಯು ಕಾಲೇಜಿನ ಮತಗಟ್ಟೆಗೆ ತೆರಳುವುದು ಲೇಟ್ ಆಯಿತು. ಜಿಲ್ಲಾ ಮಟ್ಟದ ಅಧಿಕಾರಿಯಾದ ಜಯಣ್ಣ ಚುನಾವಣಾಧಿಕಾರಿಗೆ ಮಾಹಿತಿ ನೀಡದೆ ಕೇಂದ್ರ ಸ್ಥಾನ ತೊರೆದಿರುವುದೇ ಇದಕ್ಕೆ ಕಾರಣ. ಇದು ಬೂತ್ ಮಟ್ಟದ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ ಉಂಟಾಗಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದು ಮೇ 9ರಂದು ದ.ಕ. ಜಿಲ್ಲಾ ಚುನಾವಣಾಧಿಕಾರಿಗಳ ನಡಾವಳಿಯಲ್ಲಿ ಉಲ್ಲೇಖಿಸಲಾಗಿದೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 188 ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆ ಸೆಕ್ಷನ್ 134ರ ಪ್ರಕಾರ ನಿಯಮ ಉಲ್ಲಂಘಿಸಿದ ಜಯಣ್ಣ ಅವರನ್ನು ನಾಗರಿಕ ಸೇವಾ ನಿಯಮ ಪ್ರಕಾರ ಅಮಾನತು ಮಾಡಿ ಜಿಲ್ಲಾಧಿಕಾರಿ ಮೇ 9ರಂದು ಆದೇಶ ಹೊರಡಿಸಿದ್ದಾರೆ.
ಈ ಆದೇಶಕ್ಕೆ ಉತ್ತರಿಸಿದ ಜಯಣ್ಣ, ನನ್ನ ಮೇಲೆ ಮಾಡಲಾದ ಆರೋಪಗಳನ್ನು ಅಲ್ಲಗಳೆಯುತ್ತೇನೆ. ನನ್ನದಲ್ಲದ ತಪ್ಪಿಗೆ ನನ್ನನ್ನು ಹೊಣೆ ಮಾಡಲಾಗಿದೆ. ಕಾರಣ ಕೇಳಿ ನೀಡಿದ ನೋಟೀಸ್‌ಗೆ ಪ್ರತಿಯಾಗಿ ನನ್ನ ಕೋರಿಕೆ ಸಲ್ಲಿಸುವುದಕ್ಕೂ ಅನುಮತಿ ನೀಡದೆ ನೋಟೀಸ್ ಜಾರಿಗೊಳಿಸಿರುವುದು ನನ್ನ ವೃತ್ತಿ ಜೀವನಕ್ಕೆ ಧಕ್ಕೆ ಉಂಟುಮಾಡುವುದಕ್ಕೆ ಅವಸರ ಮಾಡುವಂತೆ ತೋರುತ್ತಿದೆ ಎಂದು ಜಯಣ್ಣ ಅಭಿಪ್ರಾಯಪಟ್ಟಿದ್ದಾರೆ.
ಈ ಪ್ರಕರಣದ ವಿಚಾರಣೆಯ ತನಿಖಾಧಿಕಾರಿಯಾಗಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರನ್ನು ನೇಮಿಸಲಾಗಿದೆ.