ಕಾವೇರಿ ತಂತ್ರಾಂಶ ಜಾರಿಯಲ್ಲಿ ಸಮಸ್ಯೆ: ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಹೈಕೋರ್ಟ್ ಹೇಳಿದ್ದೇನು...?
ಕಾವೇರಿ ತಂತ್ರಾಂಶ ಜಾರಿಯಲ್ಲಿ ಸಮಸ್ಯೆ: ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಹೈಕೋರ್ಟ್ ಹೇಳಿದ್ದೇನು...?
ರಾಜ್ಯದಲ್ಲಿ ಸೊತ್ತು ಹಸ್ತಾಂತರ ಯಾ ದಾಖಲೆ ಪತ್ರ ನೋಂದಣಿ ವ್ಯವಸ್ಥೆಯನ್ನು ಸುಲಲಿತಗೊಳಿಸುವ ಕಾವೇರಿ 2.0 ತಂತ್ರಾಂಶ ಜಾರಿಯಲ್ಲಿ ಸಮಸ್ಯೆ ಆಗುತ್ತಿದ್ದು, ಈ ಕುರಿತು ಹೈಕೋರ್ಟ್ ಮಧ್ಯಪ್ರವೇಶ ಮಾಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾ. ಎಂ.ಜಿ.ಎಸ್. ಕಮಲ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠ ಸೂಕ್ತ ಪ್ರಾಧಿಕಾರದ ಮೊರೆ ಹೋಗುವಂತೆ ಅರ್ಜಿದಾರರಿಗೆ ಸೂಚಿಸಿದೆ.
ತಂತ್ರಾಂಶದ ಜಾರಿಯಲ್ಲಿ ಸಮಸ್ಯೆ ಉಂಟಾಗುತ್ತಿದೆ ಎಂದು ಬಿ. ರಾಮಾಚಾರ್ ಪಿಐಎಲ್ ಸಲ್ಲಿಸಿದ್ದರು.
ತಂತ್ರಾಂಶದ ಜಾರಿಯ ಸಂದರ್ಭದಲ್ಲಿ ಬಳಕೆದಾರರಿಗೆ ತೊಂದರೆ ಉಂಟಾಗುತ್ತಿದೆ. ನೋಂದಣಿ ಕೋರಿ ಹಾಜರುಪಡಿಸಿರುವ ದಸ್ತಾವೇಜನ್ನು ತಿರಸ್ಕರಿಸಲು ಯಾ ರದ್ದುಪಡಿಸಲು ತಂತ್ರಾಂಶದಲ್ಲಿ ಯಾವುದೇ ಅವಕಾಶ ಇರುವುದಿಲ್ಲ. ನಿಯಮದ ಪ್ರಕಾರ ಆ ರೀತಿ ನೋಂದಣಿಗೆ ಸಲ್ಲಿಸಿದ ದಸ್ತಾವೇಜನ್ನು ತಿರಸ್ಕರಿಸಲು ಅವಕಾಶ ಇಲ್ಲ. ಈ ಕುರಿತು ಮಾನ್ಯ ನ್ಯಾಯಾಲಯ ಹಲವು ತೀರ್ಪುಗಳನ್ನು ನೀಡಿವೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದರು.
ಈ ವಾದ ಆಲಿಸಿದ ನ್ಯಾಯಪೀಠ, ಅರ್ಜಿಯ ಜೊತೆಗೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ಅರ್ಜಿದಾರರು ಮೇ 2ರಂದು ಸಂಬಂಧಪಟ್ಟ ಇಲಾಖೆಗೆ ಮನವಿಯನ್ನು ಸಲ್ಲಿಸಿದ್ದಾರೆ.
ಇಲಾಖೆಯ ಉತ್ತರಕ್ಕೂ ಕಾಯದೆ ಮೇ 5ರಂದು ಹೈಕೋರ್ಟ್ ಮುಂದೆ ಪಿಐಎಲ್ ಸಲ್ಲಿಸಿದ್ದಾರೆ. ಇಲಾಖೆಯ ಮುಂದೆ ಸಲ್ಲಿಸಿದ ಅರ್ಜಿಗೆ ಉತ್ತರಿಸಲು ಸೂಕ್ತ ಕಾಲಾವಕಾಶ ನೀಡದೆ ಇಲ್ಲಿ ಪಿಐಎಲ್ ಸಲ್ಲಿಸಿರುವುದು ಸರಿಯಲ್ಲ ಎಂದು ಹೇಳಿತು.
ಸರಕಾರಿ ವಕೀಲರು ವಾದ ಮಂಡಿಸಿ, ಕಾವೇರಿ 2.0 ತಂತ್ರಾಂಶ ಒಂದು ಪಾರದರ್ಶಕ ವ್ಯವಸ್ಥೆಯಾಗಿದೆ. ರಾಜ್ಯದಲ್ಲಿ ಈಗಾಗಲೇ 152 ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಈ ತಂತ್ರಾಂಶ ಅಳವಡಿಸಲಾಗಿದೆ. ಎಲ್ಲೂ ಗಂಭೀರವಾದ ದೂರುಗಳು ಕೇಳಿಬಂದಿಲ್ಲ. ಸಾರ್ವಜನಿಕರಿಂದ ಪೂರಕವಾದ ಪ್ರತಿಕ್ರಿಯೆ ಬಂದಿದೆ ಎಂದು ಮಾಹಿತಿ ನೀಡಿದರು.
ಅಂತಿಮವಾಗಿ, ಪಿಐಎಲ್ ಹಿಂದೆ ಪಡೆಯಲು ನ್ಯಾಯಪೀಠದ ಸೂಚನೆಯಂತೆ ಅರ್ಜಿದಾರರು ಸಮ್ಮತಿ ನೀಡಿದರು. ಸಂಬಂಧಿತ ಪ್ರಾಧಿಕಾರಕ್ಕೆ ಮನವಿ ಸಲ್ಲಿಸುವಂತೆ ಸೂಚಿಸಿ ನ್ಯಾಯಪೀಠ ಪಿಐಎಲ್‌ನ್ನು ವಿಲೇ ಮಾಡಿತು.