ಮಣಿಪುರ ಘರ್ಷಣೆ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಕೆಂಡಾಮಂಡಲ !
ಮಣಿಪುರ ಘರ್ಷಣೆ: ಹೈಕೋರ್ಟ್ ತೀರ್ಪಿಗೆ ಸುಪ್ರೀಂ ಕೋರ್ಟ್ ಕೆಂಡಾಮಂಡಲ !
ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವಂತೆ ಮಣಿಪುರ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ಸಂವಿಧಾನಿಕ ಪೀಠ ಕೆಂಡಾಮಂಡಲವಾಗಿದೆ.
ಹೈಕೋರ್ಟ್ ತೀರ್ಪು ವಾಸ್ತವಿಕ ತಪ್ಪಿನಿಂದ ಕೂಡಿದೆ. ಯಾವುದೇ ಸಮುದಾಯವನ್ನು ಪರಿಶಿಷ್ಟ ಜಾತಿ ಯಾ ಪಂಗಡಕ್ಕೆ ಸೇರಿಸುವ ಪೂರ್ವ ನಿದರ್ಶನ ತೀರ್ಪಿಗೆ ಹೈಕೋರ್ಟ್ ಬದ್ಧವಾಗಿಲ್ಲ. ಈ ಹಿಂದೆ ಸಂವಿಧಾನಿಕ ಪೀಠ ನೀಡಿರುವ ತೀರ್ಪಿಗೆ ಹೈಕೋರ್ಟ್ ತೀರ್ಪು ವಿರುದ್ಧವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್, ನ್ಯಾ. ಪಿ.ಎಸ್. ನರಸಿಂಹ ಮತ್ತು ನ್ಯಾ. ಜೆ.ಬಿ. ಪರ್ದಿವಾಲಾ ಅವರಿದ್ದ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
ನ್ಯಾ. ಮುರಳೀಧರನ್ ಅವರಿಗೆ ತಮ್ಮ ತಪ್ಪನ್ನು ತಿದ್ದಿಕೊಳ್ಳಲು ಸಾಕಷ್ಟು ಸಮಯಾವಕಾಶ ನೀಡಲಾಗಿದೆ. ಆದರೂ ಅವರು ತಮ್ಮ ತಪ್ಪನ್ನು ತಿದ್ದಿಕೊಳ್ಳಲಿಲ್ಲ. ಹಾಗಾಗಿ, ನಾವೀಗ ಕಠಿಣ ಧೋರಣೆ ತಳೆಯಬೇಕಾಗಿದೆ ಎಂದು ನ್ಯಾಯಪೀಠ ಕಠಿಣ ಮಾತುಗಳನ್ನು ಆಡಿದೆ.
ಸಂವಿಧಾನಿಕ ಪೀಠದ ತೀರ್ಪುಗಳನ್ನು ಹೈಕೋರ್ಟ್ ನ್ಯಾಯಾಧೀಶರು ಪಾಲಿಸದೆ ಇದ್ದರೆ ಏನು ಮಾಡಬೇಕು ಎಂಬುದು ಸ್ಪಷ್ಟವಾಗಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ಹೈಕೋರ್ಟ್ ತೀರ್ಪಿನಿಂದಾಗಿ ಮಣಿಪುರ ರಾಜ್ಯದಲ್ಲಿ ವ್ಯಾಪಕ ಹಿಂಸಾಚಾರ, ಘರ್ಷಣೆ ಸೃಷ್ಟಿಯಾಗಿದ್ದು, ಮಣಿಪುರಿ ಬುಡಕಟ್ಟು ಜನಾಗಂದವರ ರಕ್ಷಣೆ, ಸುರಕ್ಷತೆ ಖಾತ್ರಿ ಪಡಿಸಿಕೊಳ್ಳಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾದ ಅರ್ಜಿ ವಿಚಾರಣೆ ಸಂದರ್ಭದಲ್ಲಿ ನ್ಯಾಯಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
.