ರಿಟೇಲ್ ವ್ಯಾಪಾರಿಗಳು ಗ್ರಾಹಕರ ಫೋನ್ ನಂಬರ್, ವೈಯಕ್ತಿಕ ಮಾಹಿತಿ ಕೇಳುವಂತಿಲ್ಲ
ರಿಟೇಲ್ ವ್ಯಾಪಾರಿಗಳು ಗ್ರಾಹಕರ ಫೋನ್ ನಂಬರ್, ವೈಯಕ್ತಿಕ ಮಾಹಿತಿ ಕೇಳುವಂತಿಲ್ಲ
ರಿಟೇಲ್ ವ್ಯಾಪಾರಿಗಳು ಗ್ರಾಹಕರ ದೂರವಾಣಿ ಸಂಖ್ಯೆ ಅಥವಾ ಇತರ ಯಾವುದೇ ವೈಯಕ್ತಿಕ ಮಾಹಿತಿ ಕೇಳುವಂತಿಲ್ಲ. ಇದು ಅನ್ಯಾಯದ ವ್ಯಾಪಾರಿ ಪದ್ಧತಿಯಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಸುತ್ತೋಲೆ ಹೊರಡಿಸಿದೆ.
ಖರೀದಿದಾರರು ತಮ್ಮ ವೈಯಕ್ತಿಕ ಮಾಹಿತಿ ಅಥವಾ ದೂರವಾಣಿ ಸಂಪರ್ಕ ಸಂಖ್ಯೆಯನ್ನು ನೀಡದಿದ್ದರೆ ಬಿಲ್ ಸಿದ್ದಪಡಿಸಲು ಆಗುವುದಿಲ್ಲ ಎಂದು ಮಾರಾಟಗಾರರು ಹೇಳುತ್ತಿದ್ದಾರೆ. ಇದು ನ್ಯಾಯಯುತವಲ್ಲ. ಗ್ರಾಹಕರ ರಕ್ಷಣಾ ಕಾಯ್ದೆಯ ಪ್ರಕಾರ ಇದು ಗ್ರಾಹಕರ ಹಕ್ಕಿನ ಮೇಲೆ ನಿರ್ಬಂಧ ಹೇರುವ ವ್ಯಾಪಾರ ನೀತಿ ಎಂದಾಗುತ್ತದೆ. ಹೀಗೆ ಗ್ರಾಹಕರ ವೈಯಕ್ತಿಕ ಮಾಹಿತಿ ಸಂಗ್ರಹಿಸುವುದರ ಹಿಂದೆ ಯಾವುದೇ ತರ್ಕ ಇಲ್ಲ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ರೀಟೇಲ್ ವ್ಯಾಪಾರಿಗಳು ಗ್ರಾಹಕರಿಗೆ ನಿರ್ದಿಷ್ಟ ಸೇವೆ ಸಲ್ಲಿಸಲು ಈ ಮಾಹಿತಿ ಕಲೆ ಹಾಕಲಾಗುತ್ತದೆ ಎಂದು ಕೆಲ ರೀಟೇಲ್ ವ್ಯಾಪಾರಿಗಳು ಹೇಳುತ್ತಾರೆ. ಈ ವಾದ ಅತಾರ್ಕಿಕ, ಅಸಂಬದ್ಧ ಹಾಗೂ ಸಮರ್ಥನೀಯವಲ್ಲ.
ಗ್ರಾಹಕರ ಖಾಸಗಿತನದ ವಿಚಾರವನ್ನೂ ಗಮನದಲ್ಲಿ ಇಟ್ಟುಕೊಂಡು ಚಿಲ್ಲರೆ ಉದ್ಯಮಕ್ಕೆ ಹಾಗೂ ಸಿಐಐ ಮತ್ತು ಎಫ್‌ಐಸಿಸಿಗೆ ಸೂಚನೆಯನ್ನು ನೀಡಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಹೇಳಿದೆ. ಸುತ್ತೋಲೆಯ ಪ್ರತಿಯನ್ನೂ ಅವರಿಗೆ ನೀಡಲಾಗಿದೆ.
ಬಿಲ್ ಸಿದ್ದಪಡಿಸಲು ಗ್ರಾಹಕರಿಂದ ಮೊಬೈಲ್ ನಂಬರ್ ಪಡೆದುಕೊಳ್ಳಬೇಕು ಎಂಬ ನಿಯಮ ಈ ದೇಶದಲ್ಲಿ ಇಲ್ಲ. ಅದನ್ನು ಎಲ್ಲೂ ಕಡ್ಡಾಯ ಮಾಡಿಲ್ಲ. ಇದು ಕಾನೂನುಬಾಹಿರ ಎಂದು ಸುತ್ತೋಲೆ ಹೇಳಿದೆ.
ಗ್ರಾಹಕರಿಂದ ವ್ಯಾಪಕವಾಗಿ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಈ ಸುತ್ತೋಲೆಯನ್ನು ಹೊರಡಿಸಿದೆ.