Senior Citizen Act | ಪ್ರತಿಫಲಕ್ಕೆ ಆಸ್ತಿ ವರ್ಗಾವಣೆ: ಹಿರಿಯ ನಾಗರಿಕರ ಕಾಯ್ದೆಯಡಿ ರದ್ದು ಅಸಾಧ್ಯ- ಹೈಕೋರ್ಟ್
ಪ್ರತಿಫಲಕ್ಕೆ ಆಸ್ತಿ ವರ್ಗಾವಣೆ: ಹಿರಿಯ ನಾಗರಿಕರ ಕಾಯ್ದೆಯಡಿ ರದ್ದು ಅಸಾಧ್ಯ- ಹೈಕೋರ್ಟ್
ಹಿರಿಯ ನಾಗರಿಕ ಕಾಯ್ದೆಯಡಿ ಆಸ್ತಿ ವರ್ಗಾವಣೆಯನ್ನು ರದ್ದುಪಡಿಸಿದ ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ನ್ಯಾ. ಹೇಮಂತ್ ಚಂದನ್ ಗೌಡರ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದ್ದು, ಪ್ರತಿಫಲಕ್ಕೆ ಆಸ್ತಿ ವರ್ಗಾವಣೆ ಮಾಡಿದ್ದರೆ ಆಗ ಹಿರಿಯ ನಾಗರಿಕ ಕಾಯ್ದೆಯಡಿ ಕ್ರಮ ಜರುಗಿಸಲಾಗದು ಎಂದು ತೀರ್ಪಿನಲ್ಲಿ ಹೇಳಿದೆ.
ಮಾರಾಟದ ಕ್ರಮ ಪತ್ರದಲ್ಲಿ ಆರೈಕೆ ಮಾಡುವ ಯಾವುದೇ ಷರತ್ತು ವಿಧಿಸಿಲ್ಲ. ಪ್ರತಿಫಲ ಪಡೆದು ಆಸ್ತಿಯನ್ನು ಕಾನೂನು ರೀತಿಯಲ್ಲಿ ವರ್ಗಾವಣೆ ಮಾಡಲಾಗಿದೆ. ಇಂತಹ ಸಂದರ್ಭದಲ್ಲಿ ಪೋಷಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆ- 2007ರ ಅಡಿಯಲ್ಲಿ ಯಾವುದೇ ಕ್ರಮ ಕೈಗೊಳ್ಳಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ವಿವರ:
ಮಹಿಳೆ ತಮ್ಮ ಪುತ್ರ ಮತ್ತು ಸೊಸೆಗೆ ಪ್ರೀತಿ ಮತ್ತು ವಾತ್ಸಲ್ಯದ ನೆಲೆಯಲ್ಲಿ ಆಸ್ತಿಯನ್ನು ವರ್ಗಾವಣೆ ಮಾಡಿಲ್ಲ. ಉಡುಗೊರೆ ರೂಪದಲ್ಲೂ ವರ್ಗಾವಣೆ ಆಗಿಲ್ಲ. ಆಸ್ತಿ ವರ್ಗಾವಣೆ ವೇಳೆ ಮಾಲೀಕರಾದ ಹಿರಿಯ ನಾಗರಿಕರು 8.30 ಲಕ್ಷ ರೂಪಾಯಿ ಮತ್ತು ಅವರ ಸಹೋದರಿ 1.30 ಲಕ್ಷ ರೂಪಾಯಿ ಪಡೆದುಕೊಂಡಿದ್ದಾರೆ. ಅಲ್ಲದೆ, ಆಸ್ತಿ ವರ್ಗಾವಣೆ ವೇಳೆ ಮಹಿಳೆಯನ್ನು ಆರೈಕೆ ಮಾಡುವ ಕುರಿತು ಯಾವುದೇ ಷರತ್ತು ಅಥವಾ ಉಲ್ಲೇಖ ಇರುವುದಿಲ್ಲ.
ಈ ಕ್ರಯ ಪತ್ರದ ನೋಂದಣಿಯನ್ನು ರದ್ದುಪಡಿಸುವ ಉಪ ವಿಭಾಗಾಧಿಕಾರಿಯವರ ಆದೇಶ ಕಾನೂನುಬದ್ಧವಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದ್ದು, ಆದೇಶವನ್ನು ಬದಿಗೆ ಸರಿಸಿದೆ.
ಇದೇ ವೇಳೆ, ಸಂತ್ರಸ್ತ ನೊಂದ ಮಹಿಳೆಯು ತಮ್ಮ ಹಕ್ಕುಗಳಿಗಾಗಿ ಸಿವಿಲ್ ಕೋರ್ಟ್‌ನಲ್ಲಿ ಸೂಕ್ತ ದಾವೆ ಹೂಡಲು ಸ್ವತಂತ್ರರಾಗಿದ್ದಾರೆ ಮತ್ತು ಈ ಆದೇಶವು ದಾವೆ ಹೂಡಲು ಯಾವುದೇ ಅಡ್ಡಿಯಾಗದು ಎಂದು ಸ್ಪಷ್ಟಪಡಿಸಿದೆ.
.