ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಅವ್ಯವಹಾರ ಆರೋಪ: ತನಿಖೆಗೆ ಆದೇಶ
ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಅವ್ಯವಹಾರ ಆರೋಪ: ತನಿಖೆಗೆ ಆದೇಶ
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ವಿರುದ್ಧ ಅವ್ಯವಹಾರ ಆರೋಪ ಕೇಳಿಬಂದಿದೆ.
ಸಂಘದ ಅವ್ಯವಹಾರ, ಭ್ರಷ್ಟಾಚಾರ, ಹಣ ದುರುಪಯೋಗ ಮತ್ತು ಇತರ ಚಟುವಟಿಕೆಗಳ ಬಗ್ಗೆ ತನಿಖೆ ನಡೆಸಲು ಸಹಕಾರ ಇಲಾಖೆ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದು, ಸಂಘಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲು ನಿರ್ದೇಶನ ನೀಡಲಾಗಿದೆ.
ಸರ್ಕಾರಿ ನೌಕರರ ಸಂಘವು ವಾರ್ಷಿಕ ರೂ. 20 ಕೋಟಿಗೂ ಅಧಿಕ ವಹಿವಾಟು ನಡೆಸುತ್ತದೆ. ಸಂಘಕ್ಕೆ ರಾಜ್ಯದ ಐದು ಲಕ್ಷಕ್ಕೂ ಹೆಚ್ಚು ನೌಕರರು ಸದಸ್ಯರಾಗಿದ್ದಾರೆ. ಸಂಘಕ್ಕೆ ಪ್ರತಿ ವರ್ಷ ಕೋಟ್ಯಂತರ ರೂ. ಅನುದಾನ ದೊರೆಯುತ್ತದೆ.
ಸಂಘವು ಬೈಲಾ ಉಲ್ಲಂಘನೆ ಮಾಡಿ ತೆರಿಗೆ ಕಳ್ಳತನದಂತ ಗಂಭೀರ ಸ್ವರೂಪದ ಆರ್ಥಿಕ ಅಪರಾಧಗಳು, ಭ್ರಷ್ಟಾಚಾರ, ಹಣ ದುರುಪಯೋಗ, ವಂಚನೆ ಮತ್ತು ಅವ್ಯವಸ್ಥಿತ ಮ್ಯಾನೇಜ್‌ಮೆಂಟ್ ಮೊದಲಾದ ಆರೋಪಗಳನ್ನು ಎದುರಿಸುತ್ತಿದೆ. ಸಂಘದ ವಿರುದ್ಧ ತನಿಖೆ ನಡೆಸುವಂತೆ ಐವರು ಸರ್ಕಾರಿ ನೌಕರರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ದೂರು ನೀಡಿದ್ದಾರೆ.
ಸಂಘದ ಅಧ್ಯಕ್ಷರು ಸಂಘದ ಸದಸ್ಯೇತರರಿಂದ ರೂ. 83 ಲಕ್ಷಕ್ಕೂ ಅಧಿಕ ಹಣವನ್ನು ಜಾಹೀರಾತು ರೂಪದಲ್ಲಿ ಸಂಗ್ರಹಿಸಿದ್ದಾರೆ. ಸರ್ಕಾರದಿಂದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಎರಡು ಕೋಟಿ ರೂ. ಅನುದಾನ ಪಡೆಯಲಾಗಿದೆ. ಜಾಹೀರಾತಿನಿಂದ ಒಂದು ಕೋಟಿ ರೂ. ಸಂಗ್ರಹಿಸಲಾಗಿದೆ.
ಇಷ್ಟೆಲ್ಲ ಆದರೂ, ಸಂಘದ ಖಾತೆಯಲ್ಲಿ ಉಳಿದ್ದದ್ದು 55,95,000/- ಮಾತ್ರ. ಈ ಮಧ್ಯೆ, ಸಂಘದ ಯಾವುದೇ ಸಭೆಯಲ್ಲಿ ನಿರ್ಣಯ ಮಾಡದೆ 35.02 ಲಕ್ಷ ರೂ. ಹಣ ವ್ಯಯಿಸಿ ಅಧ್ಯಕ್ಷರು ಕಿಯಾ ಕಾರ್ನಿವಲ್ ಎಂಬ ಐಷಾರಾಮಿ ಕಾರು ಖರೀದಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದಿಂದ ಸದಸ್ಯರ ಸದಸ್ಯತ್ವ ಶುಲ್ಕವನ್ನು ರೂ. 100 ನಿಂದ 200 ಗೆ ಏರಿಸುವಂತೆ ಆದೇಶ ಹೊರಡಿಸಲಾಗಿದೆ. ಈ ಮೂಲಕ ಮಹಾಸಭೆ ನಡೆಸದೆ ಸದಸ್ಯತ್ವ ಶುಲ್ಕ ಹೆಚ್ಚಿಸುವ ಸಂಘದ ಬೈಲಾವನ್ನು ಉಲ್ಲಂಘನೆ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.