-->
ಆರ್ಥಿಕ ದುರ್ಬಲ ವರ್ಗ(EWS)ಗಳಿಗೆ ಶೇ. 10 ಮೀಸಲಾತಿ: ತೀರ್ಪು ಮರು ಪರಿಶೀಲಿಸಲು ಸುಪ್ರೀಂ ನಕಾರ

ಆರ್ಥಿಕ ದುರ್ಬಲ ವರ್ಗ(EWS)ಗಳಿಗೆ ಶೇ. 10 ಮೀಸಲಾತಿ: ತೀರ್ಪು ಮರು ಪರಿಶೀಲಿಸಲು ಸುಪ್ರೀಂ ನಕಾರ

ಆರ್ಥಿಕ ದುರ್ಬಲ ವರ್ಗ(EWS)ಗಳಿಗೆ ಶೇ. 10 ಮೀಸಲಾತಿ: ತೀರ್ಪು ಮರು ಪರಿಶೀಲಿಸಲು ಸುಪ್ರೀಂ ನಕಾರ





ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (EWS) 10% ಮೀಸಲಾತಿ ನೀಡಿದ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್*




ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ (ಇಡಬ್ಲ್ಯೂಎಸ್) ಶಿಕ್ಷಣ ಮತ್ತು ಸರಕಾರಿ ಉದ್ಯೋಗದಲ್ಲಿ 10% ಮೀಸಲಾತಿ ನೀಡುವುದು ಸಂವಿಧಾನಬದ್ದ ಎಂದು ಸುಪ್ರೀಂಕೋರ್ಟ್ ದಿನಾಂಕ 7-11-2022 ರಂದು ಜನಹಿತ್ ಅಭಿಯಾನ ವಿರುದ್ಧ ಭಾರತ ಸರಕಾರ ಈ ಪ್ರಕರಣದಲ್ಲಿ ಮಹತ್ವದ ತೀರ್ಪು ನೀಡಿದೆ. ಈ ಮೂಲಕ ಕೇಂದ್ರ ಸರಕಾರವು ತಂದ ಸಂವಿಧಾನದ 103 ನೆಯ ತಿದ್ದುಪಡಿಯನ್ನು ಎತ್ತಿ ಹಿಡಿದಿದೆ.


ಸದರಿ ತೀರ್ಪನ್ನು ಮರು ಪರಿಶೀಲಿಸುವಂತೆ ಕೋರಿ ಹಿಂದುಳಿದ ಸಮುದಾಯಗಳ ಹಕ್ಕುಗಳ ಸೊಸೈಟಿ ವಿರುದ್ಧ ಜನಹಿತ್ ಅಭಿಯಾನ್ ಸಹಿತ ಇತರರು ಸಲ್ಲಿಸಲಾದ 30ಕ್ಕೂ ಅಧಿಕ ಅರ್ಜಿಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರಾದ ಶ್ರೀ ಡಿ.ವೈ. ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠವು ದಿನಾಂಕ 7.11.2022 ರ ತೀರ್ಪನ್ನು ಮರುಶೀಲಿಸಲು ಯಾವುದೇ ಆಧಾರಗಳಿಲ್ಲ ಎಂಬ ಅಭಿಪ್ರಾಯದೊಂದಿಗೆ ದಿನಾಂಕ 9.5.2023 ರಂದು ಎಲ್ಲಾ ಪುನರವಲೋಕನಾ ಅರ್ಜಿಗಳನ್ನು ವಜಾಗೊಳಿಸಿದೆ.


ದಿನಾಂಕ 7.11.2022 ರಂದು ನೀಡಿದ ಐತಿಹಾಸಿಕ ತೀರ್ಪಿನಲ್ಲಿ ಐವರು ನ್ಯಾಯಾಧೀಶರ ಸಂವಿಧಾನ ಪೀಠವು 3:2 ರ ಬಹುಮತದಿಂದ ಸಂವಿಧಾನದ 103ನೇ ತಿದ್ದುಪಡಿಯನ್ನು ಎತ್ತಿ ಹಿಡಿದಿದೆ. ಈ ತಿದ್ದುಪಡಿಯ ಮೂಲಕ ಆರ್ಥಿಕ ಆಧಾರದ ಮೇಲೆ ಮೀಸಲಾತಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಅಂತಹ ಮೀಸಲಾತಿ ಸಾಂವಿಧಾನಿಕ ಮತ್ತು ಇದು ಯಾವುದೇ ವರ್ಗದ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ.


ಮೀಸಲಾತಿ ವಿರೋಧಿಸಿ 30 ಕ್ಕೂ ಹೆಚ್ಚು ಪುನರಾವಲೋಕನ ಅರ್ಜಿಗಳು ಸಲ್ಲಿಕೆಯಾಗಿದ್ದವು. 2019ರ ಜನವರಿಯಲ್ಲಿ ಸಂವಿಧಾನದ 103ನೇ ತಿದ್ದುಪಡಿಯ ಮೂಲಕ 15(6) ಮತ್ತು 16(6)ನೇ ವಿಧಿಗಳನ್ನು ಸೇರಿಸಲಾಯಿತು. ಈ ಮೂಲಕ ಸಾಮಾನ್ಯ ವರ್ಗದ ಆರ್ಥಿಕವಾಗಿ ದುರ್ಬಲರಾಗಿರುವವರ ಉನ್ನತಿಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡುವ ಹಕ್ಕನ್ನು ಸರಕಾರಕ್ಕೆ ನೀಡಲಾಯಿತು. ಇದಾದ ನಂತರ ಸಾಮಾನ್ಯ ವರ್ಗದ ಬಡವರಿಗೆ ಉದ್ಯೋಗ ಮತ್ತು ಉನ್ನತ ಶಿಕ್ಷಣದಲ್ಲಿ 10% ಮೀಸಲಾತಿ ನೀಡುವ ವ್ಯವಸ್ಥೆಯನ್ನು ಸರಕಾರ ಮಾಡಿತು. ಆರ್ಥಿಕವಾಗಿ ದುರ್ಬಲ ವರ್ಗದ ಮೀಸಲಾತಿಯನ್ನು ಪಡೆಯುವ ಮಾನದಂಡಗಳೇನೆಂದರೆ, ವ್ಯಕ್ತಿಯ ವಾರ್ಷಿಕ ಆದಾಯ 8 ಲಕ್ಷಕ್ಕಿಂತ ಕಡಿಮೆ ಇರಬೇಕು, 5 ಎಕರೆಗಿಂತ ಕಡಿಮೆ ಕೃಷಿಭೂಮಿ ಇರಬೇಕು, ಪಟ್ಟಣದಲ್ಲಿ ಒಂದು ಸಾವಿರ ಚದರ ಅಡಿಗಿಂತ ಕಡಿಮೆ ವಿಸ್ತೀರ್ಣದ ಮನೆ ಹೊಂದಿರಬೇಕು.


ಸದರಿ ಮೀಸಲಾತಿಯನ್ನು ಪ್ರಶ್ನಿಸಿ 30ಕ್ಕೂ ಹೆಚ್ಚು ಅರ್ಜಿಗಳು ಸುಪ್ರೀಂಕೋರ್ಟಿನಲ್ಲಿ ದಾಖಲಾಗಿದ್ದು ಕಳೆದ ವರ್ಷ 7.11.2022 ರಂದು ಅಂದಿನ ಮುಖ್ಯ ನ್ಯಾಯಮೂರ್ತಿ ಶ್ರೀ ಉದಯ್ ಉಮೇಶ್ ಲಲಿತ್ ನೇತ್ರತ್ವದ ನ್ಯಾಯಮೂರ್ತಿಗಳ ಪೀಠ ಪ್ರಕರಣವನ್ನು ಆಲಿಸಿತ್ತು. ತಮ್ಮ ತೀರ್ಪಿನಲ್ಲಿ ಸುಪ್ರೀಂಕೋರ್ಟಿನ ಮೂವರು ನ್ಯಾಯಮೂರ್ತಿಗಳಾದ ಶ್ರೀ ದಿನೇಶ್ ಮಹೇಶ್ವರಿ, ಶ್ರೀಮತಿ ಬೇಲಾ ಎಂ. ತ್ರಿವೇದಿ ಮತ್ತು ಶ್ರೀ ಜಂಶೇಡ್ ಪರ್ದಿವಾಲಾ ಅವರು ಮೀಸಲಾತಿಯನ್ನು ಸಮರ್ಥಿಸಿದ್ದಾರೆ. ಎಲ್ಲಾ ದುರ್ಬಲ ವರ್ಗಗಳಿಗೆ ಸರಿಯಾದ ಪ್ರಾತಿನಿಧ್ಯ ನೀಡಿ ಅವರನ್ನು ಮುಖ್ಯ ವಾಹಿನಿಗೆ ತರಲು ಪ್ರಯತ್ನಿಸುವ ಕರ್ತವ್ಯವನ್ನು ಸಂವಿಧಾನವು ಸರಕಾರಕ್ಕೆ ನಿಗದಿಪಡಿಸಿದೆ ಎಂದು ಅಭಿಪ್ರಾಯಪಟ್ಟ ನ್ಯಾಯಾಧೀಶರು ಇಂತಹ ಪರಿಸ್ಥಿತಿಯಲ್ಲಿ ಬಡತನದಿಂದ ಹಿಂದುಳಿದಿರುವ ಸಾಮಾನ್ಯ ವರ್ಗದ ಜನರಿಗೆ ಮೀಸಲಾತಿ ನೀಡುವುದರಲ್ಲಿ ಯಾವುದೇ ಸಾಂವಿಧಾನಿಕ ಲೋಪ ಉಂಟಾಗಿಲ್ಲ ಎಂದು ಅಭಿಪ್ರಾಯಪಟ್ಟರು.


ಈಗಾಗಲೇ ಮೀಸಲಾತಿ ಪಡೆಯುವ ಪರಿಶಿಷ್ಟ ಜಾತಿ ಪಂಗಡ ಮತ್ತು ಹಿಂದುಳಿದ ವರ್ಗಗಳಿಗೆ ಶೇಕಡ 50ರಷ್ಟು ಮೀಸಲಾತಿಯ ಮಿತಿಯನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿದೆ. ಆರ್ಥಿಕವಾಗಿ ದುರ್ಬಲರಾಗಿರುವ ಸಾಮಾನ್ಯ ವರ್ಗಕ್ಕೆ ಹೊಸತಾಗಿ 10% ಮೀಸಲಾತಿ ನೀಡಲಾಗಿದೆ. ಈ 10% ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ ಪಂಗಡ ಮತ್ತು ಹಿಂದುಳಿದ ವರ್ಗಗಳ ಕೋಟವನ್ನು ನಿಗದಿಪಡಿಸುವ ಅಗತ್ಯವಿಲ್ಲ ಎಂದು ನ್ಯಾಯಾಧೀಶರು ಅಭಿಪ್ರಾಯ ಪಟ್ಟಿದ್ದಾರೆ. ಏಕೆಂದರೆ ಈ ವರ್ಗವು ಈಗಾಗಲೇ ಮೀಸಲಾತಿಯ ಲಾಭವನ್ನು ಪಡೆಯುತ್ತಿದೆ.


ಬಡತನದ ಆಧಾರದ ಮೇಲೆ ಮೀಸಲಾತಿ ನೀಡುವಾಗ ಪರಿಶಿಷ್ಟ ಜಾತಿ, ಪಂಗಡ ಮತ್ತು ಹಿಂದುಳಿದ ವರ್ಗಗಳ ಬಡವರನ್ನು ಕೂಡ ಸೇರಿಸಬೇಕಿತ್ತು. ಹಾಗೆ ಮಾಡದೇ ಇರುವುದು ತಾರತಮ್ಯ ಮತ್ತು ಸಂವಿಧಾನದ ಮೂಲ ರಚನೆಗೆ ವಿರುದ್ಧವಾಗಿದೆ ಎಂಬುದಾಗಿ ಮುಖ್ಯ ನ್ಯಾಯಮೂರ್ತಿ ಶ್ರೀ ಯು. ಯು. ಲಲಿತ್ ಮತ್ತು ಶ್ರೀ ಎಸ್. ರವೀಂದ್ರ ಭಟ್ ಅವರು ಅಭಿಪ್ರಾಯಪಟ್ಟಿದ್ದು ಅವರ ತೀರ್ಪು ಅಲ್ಪಮತದಾಗಿದ್ದರಿಂದ ಇತರ ಮೂವರು ನ್ಯಾಯಮೂರ್ತಿಗಳು ಸಂವಿಧಾನದ 103 ನೇ ತಿದ್ದುಪಡಿಯನ್ನು ಸಮರ್ಥಿಸಿ ನೀಡಿದ ತೀರ್ಪನ್ನು ಅನುಷ್ಠಾನಗೊಳಿಸಲಾಯಿತು.


ಸಂವಿಧಾನದ ಭಾಗ-4 ವಿಧಿ 46 ರ ನಿರ್ದೇಶನಾತ್ಮಕ ತತ್ವಗಳ ಅಡಿ ಮೀಸಲಾತಿಯನ್ನು ಉಲ್ಲೇಖಿಸಲಾಗಿದೆ. ರಾಜ್ಯವು ದುರ್ಬಲ ವರ್ಗದ ಜನರ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳು ವಿಶೇಷ ಕಾಳಜಿ ವಹಿಸಬೇಕಾಗಿದೆ ಮತ್ತು ನಿರ್ದಿಷ್ಟವಾಗಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರನ ಸಾಮಾಜಿಕ ಅನ್ಯಾಯ ಮತ್ತು ಎಲ್ಲಾ ಪ್ರಕಾರದ ಶೋಷಣೆಗಳಿಂದ ರಕ್ಷಿಸಬೇಕು. 46ನೇ ವಿಧಿಯು ಸಂವಿಧಾನದ 15 ಮತ್ತು 16ನೆಯ ವಿಧಿಗಳಲ್ಲಿ ಪ್ರತಿಫಲಿಸುತ್ತದೆ. ಇದು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಮೀಸಲಾತಿಯ ನಿಬಂಧನೆಗಳನ್ನು ವಾಸ್ತವವಾಗಿ ಒದಗಿಸುತ್ತದೆ.


ಚಂಪಕಂ ದೊರೈರಾಜ್ ವಿರುದ್ಧ ಮದ್ರಾಸ್ ರಾಜ್ಯ ಈ ಪ್ರಕರಣದಲ್ಲಿ ಸುಪ್ರೀಂಕೋರ್ಟ್ 1951 ರಲ್ಲಿ ನೀಡಿದ ತೀರ್ಪು ಸಮುದಾಯಗಳಿಗೆ ನೀಡುವ ಮೀಸಲಾತಿಯು ಭಾರತದ ಸಂವಿಧಾನದ ಸಮಾನತೆಯ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಅಭಿಪ್ರಾಯಪಟ್ಟಿತು. ಜಾತಿ ಆಧಾರಿತ ಮೀಸಲಾತಿಯು ಸಂವಿಧಾನದ ವಿಧಿ 29(2)ನೇ ವಿಧಿಯಡಿ ನಾಗರೀಕರಿಗೆ ಖಾತರಿ ಪಡಿಸಲಾದ ಮೂಲಭೂತ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಜಾತಿ ಆಧಾರಿತ ಮೀಸಲಾತಿಯನ್ನು ಮರುಸ್ಥಾಪಿಸಲು ನೆಹರೂ ಸರಕಾರ ವಿಧಿ 15(4) ಸೇರಿಸುವ ಮೂಲಕ ಸಂವಿಧಾನಕ್ಕೆ ಮೊದಲನೆಯ ತಿದ್ದುಪಡಿ ಮಾಡಲಾಯಿತು. ಮಂಡಲ್ ಆಯೋಗವು 1989 ರಲ್ಲಿ ಹಿಂದುಳಿದ ವರ್ಗಗಳಿಗೆ 27% ಮೀಸಲಾತಿ ಶಿಫಾರಸು ಮಾಡಿತು. ವಿ.ಪಿ.ಸಿಂಗ್ ಸರಕಾರ 1990ರಲ್ಲಿ ಶಿಫಾರಸು ಅಂಗೀಕರಿಸಿತು. ಇಂದಿರಾ ಸಹಾನಿ ವಿರುದ್ಧ ಭಾರತ ಸರಕಾರ ಪ್ರಕರಣದಲ್ಲಿ ಈ ಮೀಸಲಾತಿ ವಿಷಯ ಚರ್ಚಿಸಲ್ಪಟ್ಟು ಒಟ್ಟಾರೆ ಮೀಸಲಾತಿ ಶೇಕಡ 50 ಮೀರದಂತಿರಬೇಕು ಎಂಬ ತೀರ್ಪು ಘೋಷಿಸಲ್ಪಟ್ಟಿತು. ಕೆನೆ ಪದರದ ಪರಿಕಲ್ಪನೆಗಳನ್ನು ಪರಿಚಯಿಸಲಾಯಿತು.


ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಶೇಕಡ 10 ಮೀಸಲಾತಿ ನೀಡುವುದನ್ನು ವಿರೋಧಿಸಿ ಪುನರವಲೋಕನ ಅರ್ಜಿಗಳನ್ನು ಸಲ್ಲಿಸಿದವರ ಪರವಾಗಿ ಈ ಕೆಳಗಿನ ವಾದವನ್ನು ಮಂಡಿಸಲಾಯಿತು.


1) ಕೇವಲ ಆರ್ಥಿಕ ಮಾನದಂಡಗಳ ಆಧಾರದಲ್ಲಿ ಮೀಸಲಾತಿಯನ್ನು ನೀಡುವಂತಿಲ್ಲ.


2) ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳು ಮತ್ತು ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗಗಳನ್ನು ಇಡಬ್ಲ್ಯೂಎಸ್ ವ್ಯಾಪ್ತಿಯಿಂದ ಹೊರಗಿಡುವಂತಿಲ್ಲ.


3) ಸುಪ್ರೀಂಕೋರ್ಟ್ ಇಂದಿರಾ ಸಹಾನಿ ಪ್ರಕರಣದಲ್ಲಿ ನೀಡಿದ ತೀರ್ಪಿನ ಪ್ರಕಾರ ಒಟ್ಟು ಮೀಸಲಾತಿಯ ಪ್ರಮಾಣ 50% ಮೀರುವಂತಿಲ್ಲ.


4) ಸರಕಾರಿ ನೆರವು ಪಡೆಯದ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ರಾಜ್ಯಗಳು ಮೀಸಲಾತಿಯನ್ನು ಅನ್ವಯಿಸುವಂತಿಲ್ಲ.


ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ 10 ಶೇಕಡ ಮೀಸಲಾತಿಯನ್ನು ನೀಡಲು ಸಂವಿಧಾನಕ್ಕೆ ತಿದ್ದುಪಡಿ ತಂದ ಕೇಂದ್ರ ಸರಕಾರದ ಪರವಾಗಿ ಈ ಕೆಳಗಿನ ವಾದವನ್ನು ಮಂಡಿಸಲಾಯಿತು.


1) ಆರ್ಥಿಕ ಮಾನದಂಡಗಳ ಆಧಾರದ ಮೇಲೆ ವರ್ಗೀಕರಣ ಸಮರ್ಥನೀಯವಾಗಿದೆ.


2) ಬಡತನವು ಹಿಂದುಳಿದಿರುವಿಕೆಯ ಸೂಚಕವೆಂದು ಸುಪ್ರೀಂಕೋರ್ಟ್ ಚಿತ್ರಲೇಖ ವಿರುದ್ಧ ಮೈಸೂರು ರಾಜ್ಯ ಪ್ರಕರಣದಲ್ಲಿ ಪರಿಗಣಿಸಿದೆ.


3) ಬಡತನವೇ ಸಾಮಾಜಿಕ ಮತ್ತು ಶೈಕ್ಷಣಿಕ ಹಿನ್ನಡೆಗೆ ಕಾರಣವಾಗಿದೆ. ತಿದ್ದುಪಡಿಯು ಆರ್ಥಿಕ ನ್ಯಾಯದ ಗುರಿಯನ್ನು ಹೊಂದಿದೆ ಹಾಗೂ ಸಂವಿಧಾನದ ಮೂಲ ರಚನೆ ಮತ್ತು ಪೂರ್ವಭಾವಿ ಗುರಿಯನ್ನು ಬಲಪಡಿಸುತ್ತದೆ.


4) ಹತ್ತು ಶೇಕಡ ಮಿತಿಯು ಪರಿಶಿಷ್ಟ ಜಾತಿ, ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಉಲ್ಲಂಘಿಸುವುದಿಲ್ಲ. 50 ಶೇಕಡ ಮೀಸಲಾತಿಯ ಮಿತಿಯು ಪರಿಶಿಷ್ಟ ಜಾತಿ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳಿಗೆ ಸಂಬಂಧ ಪಟ್ಟದಾಗಿದ್ದು ಸಾಮಾನ್ಯ ವರ್ಗದ ಮೀಸಲಾತಿಗೆ ಅನ್ವಯಿಸುವಂತಿಲ್ಲ.


5) ತಿದ್ದುಪಡಿಯು ಸಂವಿಧಾನದ ಮೂಲ ರಚನೆಯನ್ನು ಮುರಿಯುವ ಬದಲು ಅದನ್ನು ಜೀವಂತಗೊಳಿಸುತ್ತದೆ.


6) ನಿರ್ದೇಶನಾತ್ಮಕ ತತ್ವಗಳ ವಿಧಿ 38 ಮತ್ತು 46 ತಿದ್ದುಪಡಿ ಸಮರ್ಪಕವಾಗಿದೆ.


ಉಭಯ ಪಕ್ಷಕಾರರ ವಾದವನ್ನು ಆಲಿಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಶ್ರೀ ವೈ.ವಿ.ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳನ್ನು ಒಳಗೊಂಡ ಸಂವಿಧಾನ ಪೀಠವು ಆರ್ಥಿಕವಾಗಿ ದುರ್ಬಲರಾಗಿರುವ ಸಾಮಾನ್ಯ ವರ್ಗದ ಜನರಿಗೆ ನೀಡಲಾದ ಹತ್ತು ಪ್ರತಿಶತ ಮೀಸಲಾತಿಯನ್ನು ಸಮರ್ಥಿಸುವ ನಿರ್ಧಾರವನ್ನು ಮರುಪರಿಶೀಲಿಸಲಾಗುವುದಿಲ್ಲ ಎಂಬುದಾಗಿ ಸ್ಪಷ್ಟಪಡಿಸಿತು.


ಈ ಸಂಬಂಧ ಸಲ್ಲಿಸಲಾಗಿದ್ದ ಮರು ಪರಿಶೀಲನಾ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ದಿನಾಂಕ 9.5.2023 ರಂದು ತಿರಸ್ಕರಿಸಿತು. ಹಾಗೂ ಇಡಬ್ಲ್ಯೂಎಸ್ ಮೀಸಲಾತಿಯನ್ನು ಸಾಂವಿಧಾನಿಕ ಎಂದು ಪರಿಗಣಿಸಿದ ದಿನಾಂಕ 7.11.2022ರ ತೀರ್ಪನ್ನು ಎತ್ತಿ ಹಿಡಿಯಿತು.


✍️ ಪ್ರಕಾಶ್ ನಾಯಕ್, ಶಿರಸ್ತೇದಾರರು, ಮಂಗಳೂರು ನ್ಯಾಯಾಲಯ ಸಂಕೀರ್ಣ




Ads on article

Advertise in articles 1

advertising articles 2

Advertise under the article