ಚೆಕ್ ಬೌನ್ಸ್: HSBC ಬ್ಯಾಂಕಿಗೆ 15 ಲಕ್ಷ ರೂ. ದಂಡ ವಿಧಿಸಿದ ತೀರ್ಪು ನೀಡಿದ ನ್ಯಾಯಾಲಯ!
ಚೆಕ್ ಬೌನ್ಸ್: HSBC ಬ್ಯಾಂಕಿಗೆ 15 ಲಕ್ಷ
ರೂ. ದಂಡ ವಿಧಿಸಿದ ತೀರ್ಪು ನೀಡಿದ ನ್ಯಾಯಾಲಯ!
ಗ್ರಾಹಕರ ಖಾತೆಯಲ್ಲಿ ಸಾಕಷ್ಟು ನಿಧಿ(Funds)
ಇದ್ದರೂ ನೀಡಲಾದ ಚೆಕ್ ಗಳನ್ನು ಅಮಾನ್ಯ ಮಾಡಿದ ಬ್ಯಾಂಕಿಗೆ ಭಾರೀ ಪ್ರಮಾಣದ ದಂಡ ವಿಧಿಸಿದ ಅಪರೂಪದ
ಹಾಗೂ ಮಹತ್ವದ ತೀರ್ಪನ್ನು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ(NCDRC) ನೀಡಿದೆ.
ಅನಿಲ್ ಮಿಲ್ಖಿರಾಮ್ ಗೋಯಲ್ Vs ಎಚ್.ಎಸ್.ಬಿ.ಸಿ.
ಲಿ. ಪ್ರಕರಣದ ವಿಚಾರಣೆ ನಡೆಸಿದ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ನ್ಯಾಯಪೀಠವು ಅನಿಲ್
ಮಿಲ್ಖಿರಾಮ್ ಗೋಯಲ್ ಮತ್ತು ಅವರ ಕುಟುಂಬಕ್ಕೆ ಉಂಟಾದ ಮಾನಸಿಕ ಕಿರುಕುಳಕ್ಕೆ ದಂಡವಾಗಿ 15 ಲಕ್ಷ ರೂ.ಗಳನ್ನು
ನೀಡುವಂತೆ ಎಚ್.ಎಸ್.ಬಿ.ಸಿ. ವಿರುದ್ಧ ಆದೇಶ ಹೊರಡಿಸಿದೆ.
ಗ್ರಾಹಕರ ಮಾಹಿತಿ - ಕೆವೈಸಿ (Know
Your Customer)ನ್ನು ನವೀಕರಿಸಿಲ್ಲ ಎಂಬ ಕಾರಣ ನೀಡಿ ಎಚ್.ಎಸ್.ಬಿ.ಸಿ. ತನ್ನ ಗ್ರಾಹಕರ ಖಾತೆಯನ್ನು
ಸ್ತಂಬನ (Dormant) ಮಾಡಿತ್ತು. ಇದರಿಂದ ಸದ್ರಿ ಗ್ರಾಹಕ ದಂಪತಿ ತಮ್ಮ 1.80 ಲಕ್ಷ ಸಾಲ ತೀರಿಸಲು
ಸಾಧ್ಯವಾಗಿರಲಿಲ್ಲ.
ತನ್ನ ಗ್ರಾಹಕರಿಗೆ ಎರಡು ವರ್ಷಕ್ಕೊಮ್ಮೆ
ತನ್ನ ಗ್ರಾಹಕರ ಮಾಹಿತಿಯನ್ನು ನವೀಕರಿಸಬೇಕು ಎಂದು ಸೂಚಿಸುವುದಕ್ಕೆ ಎಚ್.ಎಸ್.ಬಿ.ಸಿ. ಬ್ಯಾಂಕ್ ಬಳಿ
ಯಾವುದೇ ದಾಖಲೆಗಳು ಇರಲಿಲ್ಲ. ಇದನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರ್ಗಸೂಚಿಯಂತೆ ಅತಿ ಅಪಾಯಕಾರಿ
ಗ್ರಾಹಕರು ಎಂದು ವರ್ಗೀಕರಿಸುವ ಕುರಿತು ನ್ಯಾಯಪೀಠಕ್ಕೆ ತೃಪ್ತಿಕರ ವಿವರಣೆಯಾಗಲೀ, ದಾಖಲೆಯಾಗಲೀ ನೀಡುವಲ್ಲಿ
ಬ್ಯಾಂಕ್ ವಿಫಲವಾಯಿತು.
ಸದ್ರಿ ಪ್ರಕರಣದ ಅರ್ಜಿದಾರರಾದ ಗ್ರಾಹಕರು
ಪಡೆದುಕೊಂಡಿದ್ದ ಸಾಲದ ಖಾತೆಗಳನ್ನು 2009 ಮತ್ತು 2010ರಲ್ಲಿ ತೀರಿಸಿದ್ದರು. ಆ ಬಳಿಕ, ನವೆಂಬರ್
2015ರಲ್ಲಿ ಎಟಿಎಂ ಯಂತ್ರದ ಮೂಲಕ ಹಣವನ್ನು ಪಡೆಯಲು ಮುಂದಾದಾಗ ಆ ವ್ಯವಹಾರವನ್ನು ಬ್ಯಾಂಕ್ ನಿರಾಕರಿಸಿತ್ತು.
ಈ ಬಗ್ಗೆ ಗ್ರಾಹಕರು ಬ್ಯಾಂಕನ್ನು ಸಂಪರ್ಕಿಸಿದಾಗ,
ಕೆವೈಸಿ ವಿವರ ನೀಡದ ಹಿನ್ನೆಲೆಯಲ್ಲಿ ಖಾತೆಯನ್ನು ಸ್ತಂಬನ ಮಾಡಲಾಗಿದ್ದು, ವಹಿವಾಟು ಸ್ಥಗಿತಗೊಂಡಿದೆ
ಎಂದು ತಿಳಿಸಲಾಯಿತು ಎಂದು ಅರ್ಜಿದಾರ ಅನಿಲ್ ಮತ್ತು ನೀಲಂ ಗೋಯೆಲ್ ತಮ್ಮ ದೂರಿನಲ್ಲಿ ತಿಳಿಸಿದ್ದರು.
ತಾವು ಮೇ 2015ರಲ್ಲಿ ಕೆವೈಸಿ ಅಪ್.ಡೇಟ್
ಮಾಡಿದ್ದರೂ, ಮುಂಬೈ ಬಾಂದ್ರಾದಲ್ಲಿ ಇರುವ ಉಳಿತಾಯ ಖಾತೆಗೆ ಲಿಂಕ್ ಮಾಡಿದ ಸಾಲಗಳು ಕಟ್ಟದೆ ಬಾಕಿ
ಉಳಿದಿವೆ ಎಂದು ಬ್ಯಾಂಕ್ ಸಿಬ್ಬಂದಿ ತಿಳಿಸಿದ್ದರು.
ಸಾಲವನ್ನು ಸಂಪೂರ್ಣವಾಗಿ ಚುಕ್ತಾ ಮಾಡಿದ್ದರೂ
ಬ್ಯಾಂಕಿನ ಸೇವಾ ನ್ಯೂನ್ಯತೆಯಿಂದಾಗಿ ತಮಗೆ ತೊಂದರೆ ಮತ್ತು ಕಿರುಕುಳ ಉಂಟಾಗಿದೆ ಎಂದು ಆರೋಪಿಸಿ ಗ್ರಾಹಕರು
3.55 ಕೋಟಿ ಪರಿಹಾರ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಸಾಲದ ಖಾತೆಗಳು ಮುಕ್ತಾಯಗೊಂಡಿದೆ ಎಂಬುದನ್ನು
ಬ್ಯಾಂಕ್ ಒಪ್ಪಿಕೊಂಡಿತು. ಪತಿ ಕೆವೈಸಿ ದಾಖಲೆ ನೀಡಿದ್ದರೂ ಪತ್ನಿ ನೀಲಂ ತಮ್ಮ ಕೆವೈಸಿ ಮಾಹಿತಿಯನ್ನು
ಬ್ಯಾಂಕಿಗೆ ನೀಡಿರಲಿಲ್ಲ. ಇದರಿಂದ ಖಾತೆ ಸ್ತಂಬನ ಮಾಡಲಾಗಿದೆ ಎಂದು ಬ್ಯಾಂಕ್ ವಾದಿಸಿತು.
ಬ್ಯಾಂಕಿನ ಕ್ರಮ ನ್ಯಾಯಸಮ್ಮತವಲ್ಲ ಎಂದು
ಅಭಿಪ್ರಾಯಪಟ್ಟ ನ್ಯಾಯಪೀಠ, ಕ್ರಿಮಿನಲ್ ಕ್ರಮ ಜರುಗಿಸುವುದಾಗಿ ಗ್ರಾಹಕರಿಗೆ ಬ್ಯಾಂಕ್ ತಿಳಿಸಿರುವುದು
ದೂರುದಾರರ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಹೇಳಿತು.
ಗ್ರಾಹಕರ ವಿರುದ್ಧ ನಿರ್ಲಕ್ಷ್ಯ ತೋರಿದ್ದು ಸಾಬೀತಾಗಿದ್ದು, ಸೇವಾ ನ್ಯೂನ್ಯತೆಯನ್ನೂ ಬ್ಯಾಂಕ್ ಎಸಗಿದೆ ಎಂದು ತೀರ್ಪು ನೀಡಿದ ಬ್ಯಾಂಕ್, ತನ್ನ ಗ್ರಾಹಕರ ವ್ಯಕ್ತಿತ್ವ ನಷ್ಟ ಮತ್ತು ಸೇವಾ ನ್ಯೂನ್ಯತೆಗಾಗಿ 15 ಲಕ್ಷ ರೂ. ಪರಿಹಾರ ಮತ್ತು ಒಂದು ಲಕ್ಷ ರೂ. ವ್ಯಾಜ್ಯ ವೆಚ್ಚ ನೀಡುವಂತೆ ಆದೇಶಿಸಿತು. ಹಾಗೂ ಚುಕ್ತಾಗೊಂಡ ಸಾಲಕ್ಕೆ ಮತ್ತೆ ಬೇಡಿಕೆ ಇರಿಸದಂತೆ ಹೇಳಿ, ಖಾತೆಯ ಸ್ತಂಬನವನ್ನು ತೆರವುಗೊಳಿಸುವಂತೆ ನಿರ್ದೇಶನ ನೀಡಿತು.
.