ದಾಖಲೆ, ಸಾಕ್ಷ್ಯ ಇಲ್ಲದೇ ದೂರು ನೀಡಿದರೆ ಅದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ: ಕರ್ನಾಟಕ ಹೈಕೋರ್ಟ್
ದಾಖಲೆ, ಸಾಕ್ಷ್ಯ ಇಲ್ಲದೇ ದೂರು ನೀಡಿದರೆ ಅದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ: ಕರ್ನಾಟಕ ಹೈಕೋರ್ಟ್
ಮೇಲ್ನೋಟಕ್ಕೆ ಆರೋಪ ಸಾಬೀತುಪಡಿಸುವಂತಹ ಸಾಕ್ಷ್ಯ ಇಲ್ಲದೇ ದೂರು ದಾಖಲಿಸಿದರೆ ಅಂತ ಅಪರಾಧ ಪ್ರಕರಣವು ಸಂವಿಧಾನದ 21ನೇ ವಿಧಿಯನ್ವಯ ವ್ಯಕ್ತಿಯ ಜೀವನ ಮತ್ತು ಘನತೆಗೆ ಸಂಬಂಧಿಸಿದ ಮೂಲಭೂತ ಹಕ್ಕುಗಳ ಉಲ್ಲಂಘನೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ವಿ. ಶ್ರೀಶಾನಂದ ಅವರಿದ್ದ ಹೈಕೋರ್ಟ್‌ನ ಧಾರವಾಡದ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ತಮ್ಮ ವಿರುದ್ಧ ದಾಖಲಾದ ವಂಚನೆ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಮಹಾರಾಷ್ಟ್ರದ ವಿಪುಲ್ ಪ್ರಕಾಶ್ ಪಾಟೀಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ಸದ್ರಿ ಪ್ರಕರಣದಲ್ಲಿ ನೀಡಲಾದ ದೂರಿನಲ್ಲಿ ಅರ್ಜಿದಾರರ ಹೆಸರನ್ನು ದೂರುದಾರರು ಅನಗತ್ಯವಾಗಿ ಪ್ರಸ್ತಾಪಿಸಿದ್ದಾರೆ. ಹೀಗೆ ಮಾಡಿರುವುದಕ್ಕೆ ಯಾವುದೇ ದಾಖಲೆಗಳಿಲ್ಲ. ನಡೆದಿರುವ ಘಟನೆಗೂ ಅರ್ಜಿದಾರರಿಗೂ ಸಂಬಂಧವಿದೆ ಎಂದು ಕಲ್ಪಿಸಲು ಮುಂದಾಗಿದ್ದಾರೆ.
ಮೇಲ್ನೋಟಕ್ಕೆ ಯಾವುದೇ ಸಾಕ್ಷ್ಯವಿಲ್ಲದಿದ್ದರೂ ಅರ್ಜಿದಾರರ ವಿರುದ್ಧದ ಆರೋಪ ಕುರಿತು ಪ್ರಕರಣವನ್ನು ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗಲಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಅರ್ಜಿದಾರರ ವಿರುದ್ಧ ದಾಖಲೆಗಳು, ಸಾಕ್ಷ್ಯ ಇಲ್ಲದಿದ್ದರೂ ದೂರನ್ನು ಪುರಸ್ಕರಿಸಲಾಗಿದೆ. ಇದು ಕಾನೂನಿನ ದುರ್ಬಳಕೆ ಮಾತ್ರವಲ್ಲ, ಸಂವಿಧಾನದ 21ನೇ ವಿಧಿಯಡಿ ಭಾರತದ ಪೌರನಿಗೆ ನೀಡಲಾದ ಗೌರವಯುತ ಬಾಳುವ ಹಕ್ಕಿನ ಉಲ್ಲಂಘನೆ ಮತ್ತು ವ್ಯಕ್ತಿಯ ಘನತೆಗೆ ಧಕ್ಕೆ ಆಗಲಿದೆ ಎಂದು ನ್ಯಾಯಪೀಠ ಗಮನಿಸಿತು.
ಪ್ರಕರಣ: ವಿಪುಲ್ ಪ್ರಕಾಶ್ ಪಾಟೀಲ್ Vs ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್ (ಧಾರವಾಡ ಪೀಠ) Cr.P 104152/2022 Dated 30-05-2023