ಬಾಲಕಿಗೆ ಲೈಂಗಿಕ ಕಿರುಕುಳ: ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗೆ 5 ವರ್ಷ ಜೈಲು ಶಿಕ್ಷೆ
ಬಾಲಕಿಗೆ ಲೈಂಗಿಕ ಕಿರುಕುಳ: ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಗೆ 5 ವರ್ಷ ಜೈಲು ಶಿಕ್ಷೆ
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿ ಜೈಲು ಪಾಲಾಗಿದ್ದಾರೆ.
ಕ್ಷೇತ್ರ ಶಿಕ್ಷಣ ಅಧಿಕಾರಿ (ಬಿಇಓ) ಲೈಂಗಿಕ ಕಿರುಕುಳ ಆರೋಪ ನ್ಯಾಯಾಲಯದಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿ ಅಧಿಕಾರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಜೊತೆಗೆ ರೂ. 25 ಸಾವಿರ ದಂಡ ವಿಧಿಸಲಾಗಿದೆ.
ಗದಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ನ್ಯಾಯಾಧೀಶರಾದ ರಾಜೇಶ್ವರ ಶೆಟ್ಟಿ ಅಪರಾಧಿಗೆ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಅಪರಾಧಿಯ ಹೆಸರು ಶಂಕರಪ್ಪ ಮುಂಡರಗಿ. ಪ್ರಸ್ತುತ ಹೂವಿನ ಹಡಗಲಿಯ ಬಿಇಓ ಆಗಿರುವ ಅವರು ಈ ಹಿಂದೆ ಮುಂಡರಗಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಆಗಿದ್ದಾಗ ಮನೆ ಭೇಟಿ ನೆಪದಲ್ಲಿ ಬಾಲಕಿ ಮನೆಗೆ ಹೋಗಿ ಲೈಂಗಿಕ ಕಿರುಕುಳ ನೀಡಿದ್ದರು.
"ಯಾರನ್ನಾದರೂ ಮದುವೆಯಾಗು.. ಆದರೆ, ನನ್ನನ್ನೇ ಪ್ರೀತಿಸು" ಎಂದು ಹೇಳಿ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದರು. ಈ ಬಗ್ಗೆ ಮುಂಡರಗಿ ಪೊಲೀಸ್ ಠಾಣೆಯಲ್ಲಿ ಬಾಲಕಿ ಮತ್ತು ಪೋಷಕರು ದೂರು ನೀಡಿದ್ದರು.
ಆಗಿನ ಇನ್ಸ್‌ಪೆಕ್ಟರ್ ಎಸ್.ಎಂ. ಬೆಂಕಿ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಅಮರೇಶ ಉಮಾಪತಿ ಹಿರೇಮಠ ವಾದ ಮಂಡಿಸಿದ್ದರು.
.