ಮೇಲಾಧಿಕಾರಿಗೆ ನಿಂದಿಸಿದರೆ ಸೇವೆಯಿಂದ ವಜಾಗೊಳಿಸುವ ಅಗತ್ಯವಿಲ್ಲ: ಹೈಕೋರ್ಟ್
ಮೇಲಾಧಿಕಾರಿಗೆ ನಿಂದಿಸಿದರೆ ಸೇವೆಯಿಂದ ವಜಾಗೊಳಿಸುವ ಅಗತ್ಯವಿಲ್ಲ: ಹೈಕೋರ್ಟ್
ಕಚೇರಿಯಲ್ಲಿ ತನ್ನ ಮೇಲಾಧಿಕಾರಿಗೆ ನಿಂದನಾತ್ಮಕ ಭಾಷೆ ಬಳಸಿ ನಿಂದಿಸಿದರೆ ಅದಕ್ಕೆ ಆ ಉದ್ಯೋಗಿಯನ್ನು ಸೇವೆಯಿಂದ ವಜಾಗೊಳಿಸುವ ಗರಿಷ್ಠ ಶಿಕ್ಷೆ ವಿಧಿಸುವ ಅಗತ್ಯವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯಾ. ಎಸ್. ವೈದ್ಯನಾಥನ್ ಮತ್ತು ಆರ್. ಕಲೈಮತಿ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ. ಹಿಂದುಸ್ತಾನ್ ಯೂನಿ ಲಿವರ್ ಮಾಲಕತ್ವದ ಟೀ ಕಂಪೆನಿಯೊಂದರ ವಜಾಗೊಂಡ ಕಾರ್ಮಿಕ ಸಂಘದ ಸದಸ್ಯ ಎಸ್. ರಾಜಾ ಅವರು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಪ್ರಾಯ ನೀಡಿದೆ.
2009ರಲ್ಲಿ ರಾಜಾ ಅವರು ಆಡಳಿತ ಮಂಡಳಿಯ ಸದಸ್ಯರೊಬ್ಬರ ಅಂಗಿಯ ಕಾಲರ್‌ಪಟ್ಟಿ ಹಿಡಿದು ಎಳೆದಿದ್ದರು. ಮಾತ್ರವಲ್ಲದೆ, ನಿಂದನಾತ್ಮಕ ಶಬ್ದ ಬಳಸಿ ಜೋರು ಮಾಡಿದ್ದರು. ಈ ಘಟನೆಯ ವಿಚಾರಣೆ ನಡೆಸಿದ್ದ ಸಂಸ್ಥೆ ರಾಜಾ ಅವರನ್ನು ಸೇವೆಯಿಂದ ವಜಾಗೊಳಿಸಿತ್ತು.
ಇದನ್ನು ಪ್ರಶ್ನಿಸಿ ನೊಂದ ಉದ್ಯೋಗಿ ರಾಜಾ ಕಾರ್ಮಿಕ ನ್ಯಾಯಾಲಯದ ಮೆಟ್ಟಿಲೇರಿದ್ದರು.
ಇದನ್ನು ಇತ್ಯರ್ಥಪಡಿಸಿದ ಕಾರ್ಮಿಕ ನ್ಯಾಯಾಲಯ, ರಾಜಾ ಅವರನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು ಮತ್ತು ಕರ್ತವ್ಯ ರಹಿತ ದಿನಗಳ ಶೇ. 50ರಷ್ಟು ವೇತನವನ್ನು ಉದ್ಯೋಗಿಗೆ ನೀಡಬೇಕು ಎಂದು ಆದೇಶ ನೀಡಿತ್ತು.
ಈ ಬಗ್ಗೆ ಕಂಪೆನಿ ಹೈಕೋರ್ಟ್ ಮೆಟ್ಟಿಲೇರಿತ್ತು. ಆ ಮೇಲ್ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಕಾರ್ಮಿಕ ನ್ಯಾಯಾಲಯದ ತೀರ್ಪಿನ್ನು ಬದಿಗೆ ಸರಿಸಿತು. ಇದನ್ನು ಪ್ರಶ್ನಿಸಿ ರಾಜಾ ವಿಭಾಗೀಯ ಪೀಠಕ್ಕೆ ಅರ್ಜಿ ಸಲ್ಲಿಸಿದ್ದರು.
ಮೇಲಾಧಿಕಾರಿ ಮೇಲಿನ ಹಲ್ಲೆಗೆ ಕಾರಣವೇನು..? ಆಗಿನ ಪರಿಸ್ಥಿತಿಯ ಬಗ್ಗೆ ವಿಚಾರಣಾ ನ್ಯಾಯಾಲಯ ಪರಾಮರ್ಶೆ ನಡೆಸಿತ್ತೇ..? ಉದ್ಯೋಗಿಯ ಹಿಂದಿನ ದಾಖಲೆಯನ್ನು ಪರಿಗಣಿಸಲಾಯಿತೇ..? ಎಂಬುದನ್ನು ವಿಭಾಗೀಯ ಪೀಠ ಸೂಕ್ಷ್ಮವಾಗಿ ಗಮನಿಸಿತು.
ಏಕಾಏಕಿ ಉದ್ಯೋಗಿ ಮೇಲಾಧಿಕಾರಿಗೆ ಹಲ್ಲೆ ಮಾಡಲು ಯಾ ನಿಂದನೆ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪ್ರಚೋದನೆ ಯಾ ಕಿರುಕುಳ ಕಾರಣ ಇರಬಹುದು. ಒಂದು ಕೆನ್ನೆಗೆ ಹೊಡೆದರೆ, ಇನ್ನೊಂದು ಕೆನ್ನೆಯನ್ನು ನೀಡುತ್ತಾ ಸುಮ್ಮನಿರಬೇಕು ಎಂದು ಆಡಳಿತ ಮಂಡಳಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿತು.
.