ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ OPS ಜಾರಿ?- ಷಡಕ್ಷರಿ ಹೇಳಿದ್ದೇನು..?
ರಾಜ್ಯ ಸರ್ಕಾರಿ ನೌಕರರಿಗೆ ಹಳೆ ಪಿಂಚಣಿ ಯೋಜನೆ OPS ಜಾರಿ?- ಷಡಕ್ಷರಿ ಹೇಳಿದ್ದೇನು..?
ರಾಜ್ಯ ಸರ್ಕಾರಿ ನೌಕರರಿಗೆ ನೂತನ ಪಿಂಚಣಿ ನೀತಿ(NPS) ಬದಲಿಗೆ ಹಳೆಯ ಪಿಂಚಣಿ ಯೋಜನೆ ಜಾರಿಯಾಗಲಿದೆಯೇ..? ಹೌದು ಎನ್ನುತ್ತಿದ್ಧಾರೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ನೇತೃತ್ವದ ನಿಯೋಗ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮನವಿ ನೀಡಿತು.
ಮನವಿ ಸ್ವೀಕರಿಸಿದ ಡಿ.ಕೆ. ಶಿವಕುಮಾರ್, ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಭರವಸೆಯಂತೆ ಹೊಸ ಪಿಂಚಣಿ ನೀತಿಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಎನ್.ಪಿ.ಎಸ್. ರದ್ದತಿ ಕುರಿತು ಪರಿಶೀಲನೆ ನಡೆಸಲು ಹಿಂದಿನ ಸರ್ಕಾರ ಸಮಿತಿಯನ್ನು ರಚಿಸಿತ್ತು. ಶೀಘ್ರ ಸಮಿತಿಯ ವರದಿಯನ್ನು ಅವಲೋಕಿಸಬೇಕು. ಇಲ್ಲವೇ ಸರ್ಕಾರ ಸ್ವಯಂ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಷಡಕ್ಷರಿ ನೇತೃತ್ವದ ನಿಯೋಗ ಮನವಿ ಮಾಡಿತ್ತು.
ಹೀಗೆ ಮಾಡುವುದರಿಂದ 2006ರ ನಂತರ ನೇಮಕವಾದ ಎಲ್ಲ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತ ಕುಟುಂಬ ಸದಸ್ಯರಿಗೆ ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ಹೇಳಲಾಗಿತ್ತು.
ಏಳನೇ ವೇತನ ಆಯೋಗದ ವರದಿಯನ್ನು ತ್ವರಿತವಾಗಿ ಪಡೆಯಬೇಕು. ಸರ್ಕಾರಿ ನೌಕರರ ವೇತನ ಮತ್ತು ಭತ್ಯೆ ಪರಿಷ್ಕರಿಸಬೇಕು ಹಾಗೂ ಸರ್ಕಾರಿ ನೌಕರರ ಬೇಡಿಕೆಗಳನ್ನು ಕಾಲಮಿತಿಯೊಳಗೆ ಈಡೇರಿಸಬೇಕು ಎಂದು ಕೋರಿದರು.
ಇದಕ್ಕೆ ಉಪ ಮುಖ್ಯಮಂತ್ರಿಯವರು ಸಕಾರಾತ್ಮಕವಾಗಿ ಸ್ಪಂದಿಸಿದರು ಎಂದು ಷಡಕ್ಷರಿ ತಿಳಿಸಿದ್ದಾರೆ.