NI Act: ಚೆಕ್ ಅಮಾನ್ಯ ಪ್ರಕರಣ: ವಕೀಲರ ತಪ್ಪಿಗೆ ವ್ಯಾಜ್ಯಕಾರರೇ ಹೊಣೆ..!- ದೂರು ತಿದ್ದುಪಡಿ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣ: ವಕೀಲರ ತಪ್ಪಿಗೆ ವ್ಯಾಜ್ಯಕಾರರೇ ಹೊಣೆ..!- ದೂರು ತಿದ್ದುಪಡಿ ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಚೆಕ್ ಅಮಾನ್ಯ ಪ್ರಕರಣವನ್ನು ನ್ಯಾಯಾಲಯದಲ್ಲಿ ದಾಖಲಿಸುವ ಸಂದರ್ಭದಲ್ಲಿ ವಕೀಲರು ಮಾಡಿದ ತಪ್ಪಿಗೆ ವ್ಯಾಜ್ಯಕಾರರೇ ಹೊಣೆಯಾಗಿರುತ್ತಾರೆ. ದೂರಿನಲ್ಲಿ ದಾಖಲಾಗುವ ಗಂಭೀರ ಪ್ರಮಾದಗಳಿಗೆ ಪಕ್ಷಕಾರರೇ ಜವಾಬ್ದಾರಿಯಾಗಿರುತ್ತಾರೆ ಎಂದು ಬಾಂಬೆ ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪಾಲುದಾರ ಸಂಸ್ಥೆಯನ್ನು ಪ್ರಧಾನ ಆರೋಪಿಯನ್ನಾಗಿ ಹೆಸರಿಸದೇ ಇದ್ದ ಪ್ರಕರಣದಲ್ಲಿ ದೂರನ್ನು ತಿದ್ದುಪಡಿ ಕೋರಿ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಿದ ನ್ಯಾ. ಜಿ.ಎ. ಸನಪ್ ನೇತೃತ್ವದ ಬಾಂಬೆ ಹೈಕೋರ್ಟ್ ನ ನಾಗಪುರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಮುಖ ಹಾಗೂ ಅವಶ್ಯಕ ಆರೋಪಿಯನ್ನು ಹೆಸರಿಸದೇ ಇರುವುದು ದಾಖಲಾಗಿರುವ ದೂರಿನಲ್ಲಿ ಗುರುತರವಾದ ಪ್ರಮಾದವಾಗಿದೆ. ವರ್ಗಾವಣೀಯ ಪತ್ರಗಳ ಕಾಯ್ದೆ 1881ರ ಸೆಕ್ಷನ್ 138ರ ಪ್ರಕಾರ ಇದು ಕಾನೂನಾತ್ಮಕವಾಗಿ ಸರಿಪಡಿಸಲಾಗದ ಪ್ರಮಾದವಾಗಿದೆ ಎಂದು ನ್ಯಾಯಪೀಠ ತೀರ್ಪು ನೀಡಿದೆ.
ದೂರನ್ನು ಬರೆದಿರುವ ಕಾನೂನು ತಜ್ಞರು, ಆರೋಪಿ ಪಾಲುದಾರ ಸಂಸ್ಥೆಯಾಗಿದ್ದರೂ ಆ ಪಾಲುದಾರ ಸಂಸ್ಥೆಯನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಿಲ್ಲ. ಮತ್ತು ಈ ಪ್ರಕರಣದಲ್ಲಿ ವ್ಯವಹಾರವು ಆ ಪಾಲುದಾರ ಸಂಸ್ಥೆಯೊಂದಿಗೆ ನಡೆದಿರುತ್ತದೆ ಎಂಬುದು ಗಮನಾರ್ಹ ಎಂಬುದನ್ನು ಗಮನಿಸಿತು.
ಪ್ರಕರಣದ ವಿವರ:
ಸಯ್ಯದ್ ಶಹಾಬುದ್ದೀನ್ ಎಂಬವರು ತಮ್ಮ ಭೂಮಿಯನ್ನು ರಾಮ್‌ದೇವೋಬಾಬಾ ಡೆವೆಲಪ್ಪರ್ಸ್ ಆಂಡ್ ಬಿಲ್ಡರ್ ಸಂಸ್ಥೆಗೆ ಮಾರಾಟ ಮಾಡಿದರು. ಈ ವ್ಯವಹಾರದ ಪ್ರಯುಕ್ತ ದೂರುದಾರರು ಆರೋಪಿ ಸಂಸ್ಥೆಯಿಂದ 20 ಲಕ್ಷ ರೂ.ಗಳ ಚೆಕ್ ಪಡೆದರು. ಆ ಚೆಕ್ ಅಮಾನ್ಯಗೊಂಡಿದ್ದು, ಕಾನೂನು ಪ್ರಕಾರ ನೋಟೀಸ್‌ನ್ನು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸದ್ರಿ ಪಾಲುದಾರ ಸಂಸ್ಥೆಯ ಮೂವರು ಪಾಲುದಾರರನ್ನು ಆರೋಪಿಗಳನ್ನಾಗಿ ಹೆಸರಿಗೆ ದೂರನ್ನು ಮಾನ್ಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು.
ವಿಚಾರಣಾ ಹಂತದಲ್ಲಿ ದೂರುದಾರರು ಮೃತಪಟ್ಟರು. ಅವರ ವಾರಿಸುದಾರರಿಗೆ ಪ್ರಕರಣವನ್ನು ಮುಂದುವರಿಸಲು ಅವಕಾಶ ನೀಡಲಾಯಿತು. ಅದರಂತೆ, ಪ್ರೋಸೆಸ್ ಜಾರಿಗೊಳಿಸಲಾಗಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾದರು. ಪ್ರಕರಣವನ್ನು ಸಾಕ್ಷಿಗಳ ವಿಚಾರಣೆಗೆ ಕಾಯ್ದಿರಿಸಲಾಯಿತು.
ಈ ಸಂದರ್ಭದಲ್ಲಿ ದೂರುದಾರರು ದೂರಿನ ತಿದ್ದುಪಡಿಗೆ ಕೋರಿ ಅರ್ಜಿಯೊಂದನ್ನು ಸಲ್ಲಿಸಿದರು. ದೂರು ಸಿದ್ಧಪಡಿಸುವಾಗ ಕಣ್ತಪ್ಪಿನಿಂದಾಗಿ ಪಾಲುದಾರ ಸಂಸ್ಥೆಯನ್ನು ಪಕ್ಷಕಾರರನ್ನಾಗಿ ಮಾಡಿಲ್ಲ ಎಂದು ವಾದಿಸಲಾಯಿತು. ವಿಚಾರಣಾ ನ್ಯಾಯಾಲಯ ಈ ಅರ್ಜಿಯನ್ನು ಪುರಸ್ಕರಿಸಿತು.
ಜೆಎಂಎಫ್‌ಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಆರೋಪಿ ಹೈಕೋರ್ಟ್ ಮೆಟ್ಟಿಲೇರಿದರು. ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಪ್ರಕರಣ: ಹರಿಕಿಶನ್ ವಿಠಲ್‌ದಾಸ್‌ಜಿ ಚಂದಕ್ ಮತ್ತಿತರರು Vs ಸಯ್ಯದ್ ಮಜರುದ್ದೀನ್ ಸಯ್ಯದ್ ಶಹಾಬುದ್ದೀನ್ (ಮೃತರ ವಾರಿಸುದಾರರು)