ಕೋರ್ಟ್ ಆದೇಶ ಜಾರಿಗೆ 1.5 ಲಕ್ಷ ಲಂಚ: ಪೀಣ್ಯ ಪೊಲೀಸಪ್ಪನ ಬಂಧನ
ಕೋರ್ಟ್ ಆದೇಶ ಜಾರಿಗೆ 1.5 ಲಕ್ಷ ಲಂಚ: ಪೀಣ್ಯ ಪೊಲೀಸಪ್ಪನ ಬಂಧನ
ಕೋರ್ಟ್ ಆದೇಶ ಜಾರಿಗೆ 1.5 ಲಕ್ಷ ಲಂಚ ಪಡೆದುಕೊಂಡ ಆರೋಪದ ಮೇಲೆ ಪೀಣ್ಯ ಪೊಲೀಸ್ ಕಾನ್ಸ್‌ಟೆಬಲ್ ಒಬ್ಬರನ್ನು ಬಂಧಿಸಲಾಗಿದೆ.
ಕಟ್ಟಡ ಕಾಮಗಾರಿಗೆ ಪ್ರತಿವಾದಿ ಸಹಿತ ಯಾರೂ ಅಡ್ಡಿಪರಿಸದಂತೆ ನ್ಯಾಯಾಲಯ ನೀಡಿದ್ದ ಪ್ರತಿಬಂಧಕಾಜ್ಞೆಯನ್ನು ಅನುಷ್ಟಾನಕ್ಕೆ ತರಲು ಪೀಣ್ಯ ಠಾಣೆಯ ವಿಶೇಷ ಘಟಕದ ಕಾನ್ಸ್‌ಟೆಬಲ್ ಮಾರೇಗೌಡ ಎನ್ ಬರೋಬ್ಬರಿ 1.5 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಆ ಹಣವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತರು ರೆಡ್ ಹ್ಯಾಂಡ್ ಆಗಿ ಆತನನ್ನು ಬಂಧಿಸಿದ್ದಾರೆ.
ನಾಗಸಂದ್ರದ ಬಳಿಯ ನೆಲಗೆದರನಹಳ್ಳಿ ನಿವಾಸಿ ಗವಿರಾಜ್ ಗೌಡ ಎಂಬವರು ಬಿಬಿಎಂಪಿ 40ನೇ ವಾರ್ಡ್‌ನಲ್ಲಿ ಇದ್ದ ತಮ್ಮ ನಿವೇಶನವನ್ನು ದಿನೇಶ್ ಎಂಬವರಿಗೆ ಮಾರಾಟ ಮಾಡಿದ್ದರು. ಈ ನಿವೇಶನದಲ್ಲಿ ದಿನೇಶ್ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮುಂದಾಗಿದ್ದರು.
ಈ ವೇಳೆ, ಕೋಕಿಲಾ ಮತ್ತು ಲಕ್ಷ್ಮಣ್ ರೆಡ್ಡಿ ಎಂಬವರು ಈ ನಿವೇಶನ ತಮಗೆ ಸೇರಿದೆ ಎಂದು ತಗಾದೆ ತೆಗೆದರು. ದಿನೇಶ್ ಕೋರ್ಟ್‌ನಲ್ಲಿ ದಾವೆ ಹೂಡಿ ಪ್ರತಿವಾದಿಗಳಾದ ಕೋಕಿಲಾ ಮತ್ತು ಲಕ್ಷ್ಮಣ ರೆಡ್ಡಿ ವಿರುದ್ಧ ಪ್ರತಿಬಂಧಕಾಜ್ಞೆಯನ್ನು ಪಡೆದುಕೊಂಡರು.
ಈ ಕೋರ್ಟ್ ಆದೇಶವನ್ನು ಜಾರಿಗೊಳಿಸಿ ಅರ್ಜಿದಾರರಿಗೆ ರಕ್ಷಣೆ ನೀಡಬೇಕಾದರೆ ಮೂರು ಲಕ್ಷ ರೂ. ಲಂಚ ನೀಡಬೇಕು ಎಂದು ಪೀಣ್ಯ ಠಾಣೆಯ ವಿಶೇಷ ಘಟಕದ ಕಾನ್ಸ್‌ಟೆಬಲ್ ಮಾರೇಗೌಡ ಎನ್ ಬೇಡಿಕೆ ಇಟ್ಟಿದ್ದರು. ಕೊನೆಗೆ ಚೌಕಾಶಿ ಮಾಡಿ ಆತ ಒಂದೂವರೆ ಲಕ್ಷಕ್ಕೆ ಒಪ್ಪಿಕೊಂಡರು.
ಶುಕ್ರವಾರ ಸಂಜೆ ಪೀಣ್ಯ ಠಾಣೆಯ ಬಳಿಯ ಕೆಫೆ ಒಂದರಲ್ಲಿ ಮಾರೇಗೌಡ ಈ ಲಂಚದ ಹಣವನ್ನು ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಆರೋಪಿ ಕಾನ್ಸ್‌ಟೆಬಲ್ ಮಾರೇಗೌಡನನ್ನು ಬಂಧಿಸಿದ್ದಾರೆ.