ವಂಶಾಗತ ಅರ್ಚಕತ್ವದ ಉತ್ತರಾಧಿಕಾರ ಲಭ್ಯವಾಗುವುದು ಹೇಗೆ..?: ಕರ್ನಾಟಕ ಹೈಕೋರ್ಟ್ ತೀರ್ಪು
ವಂಶಾಗತ ಅರ್ಚಕತ್ವದ ಉತ್ತರಾಧಿಕಾರ ಲಭ್ಯವಾಗುವುದು ಹೇಗೆ..?: ಕರ್ನಾಟಕ ಹೈಕೋರ್ಟ್ ತೀರ್ಪು
ವಂಶಾಗತವಾಗಿ ಅರ್ಚಕರ ಪದವಿ, ಗೌರವ ಮತ್ತು ಹುದ್ದೆ ಲಭಿಸುವುದಕ್ಕೆ ಕರ್ನಾಟಕ ಹೈಕೋರ್ಟ್ ಹೊಸ ತೀರ್ಪು ನೀಡಿದೆ. ಅನುವಂಶೀಯ ಅರ್ಚಕ ಹುದ್ದೆ ಲಭ್ಯವಾಗುವುದಕ್ಕೆ ತಂದೆಯ ಕಡೆಯಿಂದ ಬರುವ ಉತ್ತರಾಧಿಕಾರತ್ವ ಬೇಕು. ತಾಯಿಯ ಕಡೆಯಿಂದ ಅಲ್ಲ ಎಂಬುದನ್ನು ಹೈಕೋರ್ಟ್ ನ್ಯಾಯಪೀಠ ಸ್ಪಷ್ಟಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎನ್. ಎಸ್. ಸಂಜಯ ಗೌಡ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಅನುವಂಶೀಯ ಅರ್ಚಕರು ಎಂಬ ಆಧಾರದಲ್ಲಿ ಅರ್ಚಕ ವೃತ್ತಿಯಲ್ಲಿ ಮುಂದುವರಿಸಲು ಸಾಧ್ಯವಿಲ್ಲ ಎಂಬ 2016ರಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಕೆ.ಆರ್. ಪುರಂ ಮಹಾಬಲೇಶ್ವರ ಸ್ವಾಮಿ ದೇವಾಲಯದ ಎಂ.ಎಸ್. ದೀಕ್ಷಿತ್ ಮತ್ತು ಎಂ.ಎಸ್. ವೆಂಕಟೇಶ್ ದೀಕ್ಷಿತ್ ಹೈಕೋರ್ಟ್ ಮೊರೆ ಹೋಗಿದ್ದರು.
ಬೆಂಗಳೂರಿನ ಕೆ.ಆರ್. ಪುರಂ ಮಹಾಬಲೇಶ್ವರ ಸ್ವಾಮಿ ದೇವಾಲಯದಲ್ಲಿ ತಾಯಿಯ ತಂದೆ ಅರ್ಚಕರಾಗಿದ್ದು, ಅವರ ನಿಧನದ ಬಳಿಕ ತಂದೆಯನ್ನು ಅರ್ಚಕರನ್ನಾಗಿ ನೇಮಿಸಲಾಗಿತ್ತು. ಈಗ ಅವರೂ ನಿಧನರಾಗಿದ್ದು, ಅನುವಂಶೀಯ ಅರ್ಚಕರನ್ನಾಗಿ ತಮ್ಮನ್ನು ನಿಯೋಜಿಸಬೇಕು ಎಂದು ಕೋರಿ ಎಂ.ಎಸ್. ದೀಕ್ಷಿತ್ ಮತ್ತು ಎಂ.ಎಸ್. ವೆಂಕಟೇಶ್ ದೀಕ್ಷಿತ್ ಹೈಕೋರ್ಟ್ ಮುಂದೆ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ನ್ಯಾಯಪೀಠ, ಅನುವಂಶೀಯ ಅರ್ಚಕತ್ವದ ಹಕ್ಕು ಬರುವುದು ತಂದೆಯ ಕಡೆಯಿಂದ ಮಾತ್ರ. ಬದಲಾಗಿ, ತಾಯಿಯ ಕಡೆಯಿಂದ ಅಲ್ಲ ಎಂದು ಸ್ಪಷ್ಟಪಡಿಸಿ ಈ ಮೇಲ್ಮನವಿ ಅರ್ಜಿಯನ್ನು ವಜಾ ಮಾಡಿದೆ.
ಅರ್ಜಿದಾರರ ಪೂರ್ವಜರು ಹಿಂದಿನ ಮೂರು ತಲೆಮಾರುಗಳ ಕಾಲ ದೇವಸ್ಥಾನದಲ್ಲಿ ಅರ್ಚಕ ವೃತ್ತಿ ನಡೆಸಿಕೊಂಡು ಬಂದಿರುವುದಕ್ಕೆ ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ. ಹೀಗಾಗಿ 2016ರಲ್ಲಿ ಧಾರ್ಮಿಕ ದತ್ತಿ ಇಲಾಖೆ ಅರ್ಚಕರ ಮುಂದುವರಿಕೆ ಆಕ್ಷೇಪಿಸಿ ಆದೇಶ ಹೊರಡಿಸಿತ್ತು.
ಪ್ರಕರಣ: ಎಂ.ಎಸ್. ರವಿ ದೀಕ್ಷಿತ್ ಮತ್ತು ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್
.