ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಈತ ಈಗ ಸಾವಿರಾರು ಕೋಟಿಗಳ ಒಡೆಯ!
ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಈತ ಈಗ ಸಾವಿರಾರು ಕೋಟಿಗಳ ಒಡೆಯ!
ಇದು ಎಲ್ಲೋ ನಡೆದ ಕಥೆಯಲ್ಲ.. ನಮ್ಮ ಬೆಂಗಳೂರಿನ ಕಥೆ. ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಈತ ಈಗ ಸಾವಿರಾರು ಕೋಟಿ ರೂ.ಗಳ ಒಡೆಯ.
ಅಚ್ಚರಿ ಆದರೂ ಸತ್ಯ. ಈ ವ್ಯಕ್ತಿ ಅತ್ಯಂತ ಸರಳ, ವಿನಮ್ರ ಉದ್ಯಮಿ. ಇವರ ಹೆಸರು ಎ. ವೇಲುಮಣಿ.
ಬೆಂಗಳೂರಿನ ಪ್ರಮುಖ ಬೀದಿಗಳಲ್ಲಿ ಓಡಾಡಿದವರಿಗೆ ಥೈರೋಕೇರ್ ಎಂಬ ಬೋರ್ಡ್ ನೋಡಲು ಸಿಕ್ಕೇ ಸಿಗುತ್ತದೆ. ಈ ಕಂಪೆನಿಯ ಸಂಸ್ಥಾಪಕ, ವ್ಯವಸ್ಥಾಪಕ ನಿರ್ದೇಶಕರೇ ಈ ವೇಲುಮಣಿ.
ಒಂದು ಸಮಯದಲ್ಲಿ ಊಟಕ್ಕೆ ಗತಿ ಇಲ್ಲದೆ ಸಂಕಷ್ಟ ಅನುಭವಿಸಿದ್ದ ವೇಲುಮಣಿ ಅವರ ತಂದೆ ಭೂರಹಿತ ಕೃಷಿಕರಾಗಿದ್ದರು. ವೇಲುಮಣಿ ಸೇರಿದಂತೆ ತನ್ನ ಮಕ್ಕಳಿಗೆ ಒಂದು ಜೊತೆಗೆ ಪ್ಯಾಂಟ್ ಹಾಗೂ ಚಪ್ಪಲಿ ಕೊಡಲು ಸಾಧ್ಯವಾಗಿರಲಿಲ್ಲ.
ಈ ಕಾರಣದಿಂದಾಗಿ ವೇಲುಮಣಿ ಅವರು ಅಕ್ಷರಶಃ ಬರಿಕಾಲಿನ ಫಕೀರನಾಗಿ ಕಾಲ ಕಳೆದಿದ್ದರು. ಅವರ ತಾಯಿ ಪ್ರತಿವಾರ ಸಂಪಾದಿಸುತ್ತಿದ್ದ 50 ರೂ. ವೇಲುಮಣಿ ಹಾಗೂ ಅವರ ಸಹೋದರರ ಹೊಟ್ಟೆ ತುಂಬಿಸುತ್ತಿತ್ತು.
ಕಷ್ಟದಲ್ಲೇ ಬಿಎಸ್‌ಸಿ ಪದವಿ ಪಡೆದ ಅವರು ಕೊಯಮತ್ತೂರು ಫಾರ್ಮಾ ಕಂಪೆನಿಯೊಂದರಲ್ಲಿ ಗುಳಿಗೆ (ಕ್ಯಾಪ್ಸೂಲ್) ಮಾಡುವ ಕೆಲಸಕ್ಕೆ ಸೇರಿದರು. ಆದರೆ, ಆಗ ಸಿಗುತ್ತಿದ್ದ ಸಂಬಳ ಅವರಿಗೆ ಯಾವುದಕ್ಕೂ ಸಾಲುತ್ತಿರಲಿಲ್ಲ. ಆ ಕಂಪೆನಿಯೂ ಹೆಚ್ಚು ದಿನ ಬಾಳಲಿಲ್ಲ. ನಾಲ್ಕೇ ವರ್ಷಗಳಲ್ಲಿ ಕಂಪೆನಿ ದಿವಾಳಿಯಾಯಿತು. ವೇಲುಮಣಿ ಮತ್ತೆ ನಿರುದ್ಯೋಗಿಯಾದರು.
ಆ ನಂತರ ವೇಲುಮಣಿ ಕೈಹಿಡಿದದ್ದು ವಾಣಿಜ್ಯ ನಗರಿ ಮುಂಬೈ. ಈ ಹಿಂದೆ ಕಂಪೆನಿಯಲ್ಲಿ ಕೆಲಸ ಮಾಡಿದ್ದ ಅನುಭವ, ಅವರು ನೀಡಿದ ಅದ್ಭುತ ಸಂದರ್ಶನ ಬಿಎಆರ್‌ಸಿ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವಲ್ಲಿ ವೇಲುಮಣಿ ಯಶಸ್ವಿಯಾದರು.
ಅಲ್ಲಿಂದ 14 ವರ್ಷ ಕೆಲಸ ಮಾಡಿದ ವೇಲುಮಣಿ ತಮ್ಮ ಪಿಎಫ್ ಹಣವನ್ನು ಒಟ್ಟು ಸೇರಿಸಿ ಥೈರೋಕೇರ್ ಎಂಬ ಕಂಪನಿ ಶುರು ಮಾಡಿದರು.
ಅಲ್ಲಿಂದ ಅವರ ಪಯಣ ಆರಂಭವಾದದ್ದು ಈಗ ಕೋಟಿಗಟ್ಟಲೆ ಮೌಲ್ಯದ ಕಂಪನಿಯ ಒಡೆಯನಾಗುವ ತನಕ ಅವರದ್ದು ಯಶೋಗಾಥೆ..
1996ರಲ್ಲಿ ಬರೀ ಒಂದು ಲಕ್ಷ ರೂ. ಬಂಡವಾಳ ಹಾಕಿ ಮಾಡಿದ್ದ ಕಂಪೆನಿ 2021ರಲ್ಲಿ ಏಳು ಸಾವಿರ ಕೋಟಿ ರೂಪಾಯಿ ಮೌಲ್ಯದ ಕಂಪೆನಿಯಾಗಿ ಗುರುತಿಸಿಕೊಂಡಿತು. ಈ ನಡುವೆ ಕಂಪನಿಯಲ್ಲಿ ವೇಲುಮಣಿ ಅವರ ಶೇರುಗಳ ಬೆಲೆ ಐದು ಸಾವಿರ ಕೋಟಿ ರೂ.ಗಳಾಗಿತ್ತು. ತಮ್ಮಲ್ಲಿದ್ದ ಶೇ. 66 ರಷ್ಟು ಶೇರುಗಳನ್ನು ಫಾರ್ಮ್ ಈಸಿ ಕಂಪೆನಿಗೆ 4546 ಕೋಟಿ ರೂಪಾಯಿ ಮೌಲ್ಯಕ್ಕೆ ಮಾರಾಟ ಮಾಡಿದರು.
ಈಗ ಥೈರೋಕೇರ್ ಕಂಪೆನಿ 2500 ಕೋಟಿ ರೂಪಾಯಿ ಮೌಲ್ಯದ ಕಂಪೆನಿಯಾಗಿ ಗುರುತಿಸಿಕೊಂಡಿದೆ.