ಶಾಸಕರಿಗೆ ಮಾಸಿಕ 20,000/- ಫೋನ್ ಭತ್ಯೆ: ದುಂದುವೆಚ್ಚದ ಅನುದಾನಕ್ಕೆ ಸಾರ್ವಜನಿಕರ ವ್ಯಾಪಕ ಆಕ್ರೋಶ
ಶಾಸಕರಿಗೆ ಮಾಸಿಕ 20,000/- ಫೋನ್ ಭತ್ಯೆ: ದುಂದುವೆಚ್ಚದ ಅನುದಾನಕ್ಕೆ ಸಾರ್ವಜನಿಕರ ವ್ಯಾಪಕ ಆಕ್ರೋಶ
ಕರ್ನಾಟಕದ ಶಾಸಕರಿಗೆ ಪ್ರತಿ ತಿಂಗಳು ದೂರವಾಣಿ ಭತ್ಯೆ ಎಂದು 20 ಸಾವಿರ ರೂಪಾಯಿ ಕೊಡುತ್ತಿರುವುದಕ್ಕೆ ಸಾರ್ವಜನಿಕರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಕೇವಲ 700 ರೂ. ರೀಚಾರ್ಜ್ ಮಾಡಿದರೆ ಪ್ರತಿ ದಿನ 3 GB ಹೈಸ್ಪೀಡ್ ಡಾಟಾದೊಂದಿಗೆ ಎಷ್ಟು ಬೇಕಾದರೂ ಕರೆ ಮಾಡುವ ಸೌಲಭ್ಯ ಇದೆ. ಹೀಗಿರುವಾಗ, ಪ್ರತಿ ತಿಂಗಳು 20,000/- ಅಲವೆನ್ಸ್ ಕೊಡುವುದು ಸರಿಯಲ್ಲ. ಇದಕ್ಕೆ ಬ್ರೇಕ್ ಹಾಕಿದರೆ ಪ್ರತಿ ತಿಂಗಳು 11 ಬಡವರಿಗೆ ಉಚಿತವಾಗಿ ಮನೆ ಕಟ್ಟಿ ಕೊಡಬಹುದು ಎಂದು ವ್ಯಕ್ತಿಯೊಬ್ಬರು ಮುಖ್ಯಮಂತ್ರಿಯವರ ಗಮನ ಸೆಳೆದಿದ್ದಾರೆ
ಈ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಹೋರಾಟಗಾರ ಅಶೋಕ್ ಕೆ. ಎಂಬವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮನವಿ ಮಾಡಿದ್ದು, ಈ ಅವೈಜ್ಞಾನಿಕ ಹಾಗೂ ಅಪ್ರಸ್ತುತ ಭತ್ಯೆಯನ್ನು ವಾಪಸ್ ಪಡೆಯುವಂತೆ ಆಗ್ರಹಿಸಿದ್ದಾರೆ.
ಶಾಸಕರ ವೇತನ ಎಷ್ಟು ಗೊತ್ತೇ..?
ಎಪ್ರಿಲ್ 1, 2022ರಲ್ಲಿ ಶಾಸಕರ ವೇತನವನ್ನು ಶೇ. 50ರಷ್ಟು ಹೆಚ್ಚಿಸಲಾಗಿದೆ. ದಾಖಲೆಯ ಪ್ರಕಾರ ಒಬ್ಬ ಶಾಸಕರಿಗೆ 2.05 ಲಕ್ಷ ರೂಪಾಯಿಗಳಷ್ಟು ಗೌರವ ವೇತನ ದೊರೆಯುತ್ತದೆ.
ಇದರಲ್ಲಿ ಮೂಲ ವೇತನ 40000/-, ಕ್ಷೇತ್ರ ಪ್ರಯಾಣ ಭತ್ಯೆ 60,000/-, ಆಪ್ತ ಸಹಾಯಕರ ವೇತನ 20,000, ಅಂಚೆ ವೆಚ್ಚ 5,000/- ಮತ್ತು ಫೋನ್ ಭತ್ಯೆ 20,000/- ನೀಡಲಾಗುತ್ತಿದೆ.
ಇಂತಹ ವೆಚ್ಚಗಳಿಗೆ ಸಿದ್ದರಾಮಯ್ಯ ಸರ್ಕಾರ ಬ್ರೇಕ್ ಹಾಕಬೇಕು, ಅನಗತ್ಯ ದುಂದು ವೆಚ್ಚ ನಿಲ್ಲಿಸಬೇಕು ಎಂದು ಮನವಿಯಲ್ಲಿ ಅವರು ಆಗ್ರಹಿಸಿದ್ದಾರೆ.
.