ನ್ಯಾಯಮಂಡಳಿಯಲ್ಲಿ ವಕಾಲತ್ತು, ವಾದಿಸುವುದು ವಕೀಲರ ಹಕ್ಕು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ನ್ಯಾಯಮಂಡಳಿಯಲ್ಲಿ ವಕಾಲತ್ತು, ವಾದಿಸುವುದು ವಕೀಲರ ಹಕ್ಕು: ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು
ನ್ಯಾಯಮಂಡಳಿಯಲ್ಲಿ ಪಕ್ಷಕಾರರನ್ನು ಪ್ರತಿನಿಧಿಸುವುದು ಮತ್ತು ಅವರ ಪರ ವಾದ ಮಂಡಿಸುವುದು ವಕೀಲರ ಹಕ್ಕು. ಅದನ್ನು ಜಿಲ್ಲಾಧಿಕಾರಿಯಾಗಲೀ, ಸಕ್ಷಮ ಪ್ರಾಧಿಕಾರವಾಗಲೀ ನಿರಾಕರಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆ 2007ರ ಸೆಕ್ಷನ್ 17ರ ಅನ್ವಯ ನ್ಯಾಯಮಂಡಳಿಯಲ್ಲಿ ವಕೀಲರು ಪ್ರತಿನಿಧಿಸುವಂತಿಲ್ಲ ಎಂಬ ಕಾನೂನು ಅಸಂವಿಧಾನಿಕ ಎಂದು ನ್ಯಾಯಪೀಠ ತೀರ್ಪಿನಲ್ಲಿ ಹೇಳಿದೆ.
ಹಿರಿಯ ನಾಗರಿಕ ಕಾಯ್ದೆಯಡಿ ಪರಿಹಾರ ಕೋರಿ ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯದ ಮುಂದೆ ಅರ್ಜಿ ಹಾಕುವಾಗ, ಯಾ ಮೇಲ್ಮನವಿ ಸಲ್ಲಿಸುವಾಗ ಹಿರಿಯ ನಾಗರಿಕರು ವಕೀಲರ ಮೂಲಕ ಪ್ರತಿನಿಧಿಸುವಿಕೆಯನ್ನು ನಿರಾಕರಿಸುವಂತಿಲ್ಲ. ವಕೀಲರನ್ನು ನೇಮಿಸುವುದು ಅವರ ಹಕ್ಕು ಎಂದು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.
ಉಡುಪಿ ಜಿಲ್ಲೆಯ ಪುತ್ತೂರಿನ ಕೆ. ಶ್ರೀನಿವಾಸ ಗಾಣಿಗ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ, ಹಿರಿಯ ನಾಗರಿಕರ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 17 ಅಸಂವಿಧಾನಿಕ ಮತ್ತು ಇದು ವಕೀಲರ ಕಾಯ್ದೆಯ ಸೆಕ್ಷನ್ 30ರ ವಿರುದ್ಧವಾಗಿದೆ ಎಂದು ಅರ್ಜಿಯನ್ನು ಪುರಸ್ಕರಿಸಿತು. ಹಾಗೂ ಸಕ್ಷಮ ಪ್ರಾಧಿಕಾರ, ನ್ಯಾಯಮಂಡಳಿಯ ಮುಂದೆ ಪಕ್ಷಕಾರರನ್ನು ಪ್ರತಿನಿಧಿಸಲು ವಕೀಲರಿಗೆ ಅನುಮತಿ ನೀಡಿತು.
ಸಾಮಾನ್ಯವಾಗಿ, ಟ್ರಿಬ್ಯೂನಲ್ ಯಾ ಸಕ್ಷಮ ಪ್ರಾಧಿಕಾರದ ಮುಂದೆ ಏನೆಲ್ಲ ದಾಖಲೆಗಳನ್ನು ಹಾಜರುಪಡಿಸಬೇಕು ಎಂದು ಪಕ್ಷಕಾರರಿಗೆ ಗೊತ್ತಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಹಿರಿಯ ನಾಗರಿಕರಿಗೆ ವಕೀಲರ ನೆರವು ಅಗತ್ಯವಿರುತ್ತದೆ. ಸಂವಿಧಾನದ 21ನೇ ವಿಧಿಯಡಿ ದೊರೆತ ಹಕ್ಕಿನ ಭಾಗವಾಗಿ ಕಾನೂನು ನೆರವು ಪಡೆಯುವ ಹಕ್ಕು ಇರುತ್ತದೆ. ಇದನ್ನು ಮೊಟಕು ಮಾಡಲಾಗದು ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಪ್ರಕರಣ: ಕೆ.ಶ್ರೀನಿವಾಸ್ ಗಾಣಿಗ Vs ಭಾರತ ಸರ್ಕಾರ
ಕರ್ನಾಟಕ ಹೈಕೋರ್ಟ್, WP 1912/2023 Dated 26-06-2023
.