ವಕೀಲರ ಪೋಷಕರಿಗೂ ವಿಮೆ: ಅರ್ಜಿಯನ್ನು ಐಪಿಎಲ್ ಆಗಿ ಪರಿವರ್ತಿಸಿದ ಕರ್ನಾಟಕ ಹೈಕೋರ್ಟ್!
ವಕೀಲರ ಪೋಷಕರಿಗೂ ವಿಮೆ: ಅರ್ಜಿಯನ್ನು ಐಪಿಎಲ್ ಆಗಿ ಪರಿವರ್ತಿಸಿದ ಕರ್ನಾಟಕ ಹೈಕೋರ್ಟ್!
ವಕೀಲರ ಪರಿಷತ್ ಮೂಲಕ ಕೇಂದ್ರ ಸರ್ಕಾರ ನೀಡಲು ಉದ್ದೇಶಿಸಿರುವ ವಿಮಾ ಸೌಲಭ್ಯವನ್ನು ವಕೀಲರ ಪೋಷಕರಿಗೂ ವಿಸ್ತರಿಸಬೇಕು ಎಂದು ಕೋರಿ ತುಮಕೂರಿನ ವಕೀಲರಾದ ಎಲ್. ರಮೇಶ್ ನಾಯಕ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿಯನ್ನು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ ವಿಚಾರಣೆಗೆ ಎತ್ತಿಕೊಂಡಿತು.
ವೃತ್ತಿನಿರತ ವಕೀಲರ ಪೋಷಕರನ್ನೂ ವಿಮಾ ಯೋಜನೆಯ ವ್ಯಾಪ್ತಿಗೆ ಒಳಪಡಿಸುವ ವಿಚಾರವು ಸಾಮಾಜಿಕ ಕ್ರಿಯಾ ದಾವೆಯ ಗುಣ ಹೊಂದಿದ್ದು, ಈ ಅರ್ಜಿಯನ್ನು ರೋಸ್ಟರ್ ಪೀಠದ ಮುಂದೆ ವಿಚಾರಣೆಗೆ ಪಟ್ಟಿ ಮಾಡುವಂತೆ ರಿಜಿಸ್ಟ್ರಿಗೆ ನಿರ್ದೇಶನ ನೀಡಲಾಯಿತು.
ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ರಾಜ್ಯದಲ್ಲಿ ಇರುವ ಎಲ್ಲ ವಕೀಲರ ಮಾಹಿತಿಯನ್ನು ಪಡೆದುಕೊಂಡಿದೆ. ಈ ಬಗ್ಗೆ ಎಲ್ಲ ವಕೀಲರ ಸಂಘಗಳಿಗೂ ಅದು ಪತ್ರ ಬರೆದಿದೆ. ಆದರೆ, ಈ ಪ್ರಕ್ರಿಯಯಲ್ಲಿ ವಕೀಲರ ಪತಿ ಯಾ ಪತ್ನಿ ಮತ್ತು ಮಕ್ಕಳ ವಿವರವನ್ನು ಪಡೆದುಕೊಂಡಿದೆ. ಆದರೆ, ಪೋಷಕರನ್ನು ವಿಮಾ ಯೋಜನೆಯ ವ್ಯಾಪ್ತಿಗೆ ತಂದಿಲ್ಲ ಎಂದು ವಕೀಲರು ವಾದಿಸಿದ್ದಾರೆ.
ಈ ವಿಷಯದ ಕುರಿತಂತೆ ವಕೀಲರ ಪರಿಷತ್ತಿಗೆ ಇ-ಮೇಲ್ ಮೂಲಕ ಮನವಿ ಸಲ್ಲಿಸಲಾಗಿದೆ. ಆದ್ದರಿಂದ ವಕೀಲರ ವಿಮಾ ಯೋಜನೆಯ ವ್ಯಾಪ್ತಿಗೆ ವಕೀಲರ ಪೋಷಕರನ್ನೂ ತರಬೇಕು ಎಂದು ರಾಜ್ಯ ಸರ್ಕಾರ, ಭಾರತೀಯ ವಕೀಲರ ಪರಿಷತ್ತು ಮತ್ತು ರಾಜ್ಯ ವಕೀಲರ ಪರಿಷತ್ತಿಗೆ ನಿರ್ದೇಶನ ನೀಡಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.