ಸಣ್ಣ ರೈತರು, ಬಡವರ ಕೇಸ್ 6 ತಿಂಗಳಲ್ಲೇ ಪೂರ್ಣ: ಹೊಸ ಮಸೂದೆಯ ಬಗ್ಗೆ ವಿವರ
ಸಣ್ಣ ರೈತರು, ಬಡವರ ಕೇಸ್ 6 ತಿಂಗಳಲ್ಲೇ ಪೂರ್ಣ: ಹೊಸ ಮಸೂದೆಯ ಬಗ್ಗೆ ವಿವರ
ರಾಜ್ಯದಲ್ಲಿ ಎಲ್ಲ ಮಾದರಿಯ ನ್ಯಾಯಾಲಯಗಳಲ್ಲಿ ಸಣ್ಣ, ಅತಿ ಸಣ್ಣ ರೈತರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸೇರಿದ ವ್ಯಾಜ್ಯಗಳು ಇನ್ನು ಮುಂದೆ ಆರು ತಿಂಗಳಲ್ಲಿ ಇತ್ಯರ್ಥಗೊಳ್ಳಲಿದೆ.
ಇದಕ್ಕಾಗಿ, ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ 2023ರನ್ನು ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾಗಿದ್ದು, ಅನುಮೋದನೆಯೂ ದೊರೆತಿದೆ.
ಈ ತಿದ್ದುಪಡಿ ಕಾಯ್ದೆಯಿಂದಾಗಿ ಬಡವರ ಕೋರ್ಟ್ ಕೇಸ್‌ಗಳು ಆರು ತಿಂಗಳಲ್ಲಿ ಕಾಲಮಿತಿಯೊಳಗೆ ಇತ್ಯರ್ಥಗೊಳ್ಳಲಿದೆ.
ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯದಾನ ವಿಳಂಬವಾಗುತ್ತಿರುವುದರಿಂದ ಸಣ್ಣ ರೈತರು ಹಾಗೂ ಆರ್ಥಿಕ ದುರ್ಬಲ ವರ್ಗದವರು ಅತೀವ ತೊಂದರೆಗೊಳಗಾಗುತ್ತಾರೆ. ಎಷ್ಟೋ ಬಾರಿ ಕಕ್ಷಿದಾರರು ಆರ್ಥಿಕ ಬಲ ಇಲ್ಲದೆ ಪ್ರಕರಣಗಳನ್ನು ಅರ್ಧಕ್ಕೆ ಕೈಬಿಟ್ಟುಬಿಡುತ್ತಾರೆ.
ಇದನ್ನು ತಡೆಗಟ್ಟಲು ನ್ಯಾಯಾಲಯಗಳಲ್ಲಿ ತ್ವರಿತಗತಿಯ ನ್ಯಾಯದಾನಕ್ಕೆ ಈ ಸಿವಿಲ್ ಪ್ರಕ್ರಿಯಾ ಸಂಹಿತೆ (ಕರ್ನಾಟಕ ತಿದ್ದುಪಡಿ) ವಿಧೇಯಕ 2023ನ್ನು ಮಂಡಿಸಲಾಗಿದೆ.
ಯಾವುದೇ ಕೋರ್ಟ್ ಸಣ್ಣ ರೈತರು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸೇರಿದ ವ್ಯಕ್ತಿಗಳ ಪ್ರಕರಣಗಳನ್ನು ಆದ್ಯತೆ ಮೇಲೆ ತೆಗೆದುಕೊಳ್ಳಬೇಕು. ಅವುಗಳನ್ನು ಆರು ತಿಂಗಳ ಕಾಲಮಿತಿಯಲ್ಲಿ ವಿಚಾರಣೆ ನಡೆಸಿ ಪ್ರಕರಣವನ್ನು ಇತ್ಯರ್ಥಪಡಿಸಬೇಕಾಗುತ್ತದೆ.
ಈ ವಿಧೇಯಕ ಜಾರಿಗೆ ಬಂದ ನಂತರ, ಸದ್ಯ ವಿವಿಧ ಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳೂ ಇದಕ್ಕೆ ಒಳಪಡಲಿದೆ. ಈ ಪ್ರಕರಣಗಳ ಮುಂದಿನ ವಿಚಾರಣೆಗೆ ನಿಗದಿಯಾದ ದಿನಾಂಕದಿಂದ ಕಾಲಮಿತಿ ಅನ್ವಯಿಸುತ್ತದೆ.