ಪೋಷಕರಲ್ಲಿ ಯಾರೊಬ್ಬರು SC/ST ಸೇರಿದ್ದರೆ, ಮಗುವನ್ನೂ ಅದೇ ವರ್ಗದಲ್ಲಿ ಪರಿಗಣಿಸಬಹುದು: ಹೈಕೋರ್ಟ್
ಪೋಷಕರಲ್ಲಿ ಯಾರೊಬ್ಬರು SC/ST ಸೇರಿದ್ದರೆ, ಮಗುವನ್ನೂ ಅದೇ ವರ್ಗದಲ್ಲಿ ಪರಿಗಣಿಸಬಹುದು: ಹೈಕೋರ್ಟ್
ಪೋಷಕರಲ್ಲಿ ತಂದೆ ಅಥವಾ ತಾಯಿ ಯಾರಾದರೂ ಒಬ್ಬರು ಆರ್ಥಿಕವಾಗಿ ತೊಂದರೆ ಎದುರಿಸುತ್ತಿರುವ ಪರಿಶಿಷ್ಟ ಸಮುದಾಯಕ್ಕೆ ಸೇರಿದ್ದರೆ ಅಂತಹ ಮಗುವನ್ನು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ್ದು ಎಂದು ಪರಿಗಣಿಸಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾ. ವಿಜು ಅಬ್ರಹಾಂ ಅವರಿದ್ದ ನ್ಯಾಯಪೀಠ ಈ ಮಹತ್ವದ ಆದೇಶ ಹೊರಡಿಸಿದೆ. ಸದ್ರಿ ಪ್ರಕರಣದಲ್ಲಿ ಅರ್ಜಿದಾರರ ತಂದೆ ಸಿರಿಯನ್ ಕ್ರಿಶ್ಚಿಯನ್ ಸಮುದಾಯದವರಾಗಿದ್ದು, ತಾಯಿ ಹಿಂದೂ ಪಣಿಯಾ ಸಮುದಾಯಕ್ಕೆ ಸೇರಿದವರಾಗಿದ್ದಾರೆ. 1950ರ ಸಂವಿದಾನದ ಆದೇಶ, ಎರಡನೇ ಶೆಡ್ಯೂಲ್ ಪ್ರಕಾರ ಮಾನ್ಯತೆ ಪಡೆದ ಪರಿಶಿಷ್ಟ ಪಂಗಡ ಸಮುದಾಯವಾಗಿದೆ.
ವಿದ್ಯಾರ್ಥಿನಿಯೊಬ್ಬರು ಜಾತಿ ಪ್ರಮಾಣಪತ್ರ ಕೋರಿ ಅರ್ಜಿ ಸಲ್ಲಿಸಿದ್ದು, ತಾನು ಪಣಿಯ ಜಾತಿಗೆ ಸೇರಿದ್ದು, ಪಣಿಯ ಜಾತಿಗೆ ನೀಡುವ ಎಲ್ಲ ಸವಲತ್ತುಗಳಿಗೆ ಅರ್ಹಳು ಎಂದು ಘೋಷಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಮಗುವನ್ನು ಸಮುದಾಯ ತನ್ನದೆಂದು ಒಪ್ಪಿಕೊಂಡಿರುವಾಗ, ಆ ಮಗು ಅದೇ ಸಾಮಾಜಿಕ ತತ್ವದಲ್ಲಿ ಬದುಕುತ್ತಿದ್ದರೆ ಆಗ ಆ ಮಗುವನ್ನು ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿದೆ ಎಂದು ಪರಿಗಣಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಸೂಕ್ತ ವಿಚಾರಣೆ ನಡೆಸಿದ ಬಳಿಕ, ನ್ಯಾಯಾಲಯದ ಮುಂದೆ ಇರಿಸಲಾದ ದಾಖಲೆಗಳು ಮತ್ತು ಮೌಖಿಕ ಸಾಕ್ಷ್ಯವನ್ನು ಪರಿಗಣಿಸಿ ವಿದ್ಯಾರ್ಥಿನಿ ಪಣಿಯ ಸಮುದಾಯಕ್ಕೆ ಸೇರಿದವರು ಎಂದು ಘೋಷಿಸಿ, ಕೆಐಆರ್‌ಎಡಿಎಸ್ ನೀಡಿದ ವರದಿಯನ್ನು ಬದಿಗೆ ಸರಿಸಿತು. ಆಕೆ ಪಣಿಯ ಸಮುದಾಯಕ್ಕೆ ಸೇರಿದವರು ಎಂಬ ವಾದವನ್ನು ಬೆಂಬಲಿಸುವ ಸೂಕ್ತ ದಾಖಲೆಗಳನ್ನು ಒದಗಿಸಲು ಅರ್ಜಿದಾರರು ಮುಕ್ತವಾಗಿದ್ದಾರೆ ಎಂದು ತಿಳಿಸಿತು.
ರೆಬೆಕಾ ಮಥಾಯ್ Vs ಕೇರಳ ಸರ್ಕಾರ (ಕೇರಳ ಹೈಕೋರ್ಟ್)