ನೋಟೀಸ್ ಇಲ್ಲದೆ ನೇರವಾಗಿ ಗ್ರಾ.ಪಂ. ಸದಸ್ಯರ ಅನರ್ಹತೆ: ಹೈಕೋರ್ಟ್ ನೀಡಿದ ತೀರ್ಪೇನು..?
ನೋಟೀಸ್ ಇಲ್ಲದೆ ನೇರವಾಗಿ ಗ್ರಾ.ಪಂ. ಸದಸ್ಯರ ಅನರ್ಹತೆ: ಹೈಕೋರ್ಟ್ ನೀಡಿದ ತೀರ್ಪೇನು..?
ಸಂವಿಧಾನಿಕ ಕರ್ತವ್ಯ ನಿರ್ವಹಿಸದ ಗ್ರಾಮ ಪಂಚಾಯತ್ ಸದಸ್ಯರನ್ನು ಅನರ್ಹಗೊಳಿಸಲು ನೋಟೀಸ್ ನೀಡಲೇಬೇಕು ಎಂಬ ಕಡ್ಡಾಯ ನಿಯಮವಿಲ್ಲ. ನೋಟೀಸ್ ನೀಡಿದೆ ನೇರವಾಗಿ ಗ್ರಾಮ ಪಂಚಾಯತ್ ಸದಸ್ಯರನ್ನು ಅನರ್ಹತೊಳಿಸಬಹುದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಆಸ್ತಿ ವಿವರ ನೀಡದ ಹಿನ್ನೆಲೆಯಲ್ಲಿ ಅನರ್ಹಗೊಂಡ ಕಲಬುರ್ಗಿಯ ಆಳಂದ ತಾಲೂಕಿನ ಮೊಘಾ ಗ್ರಾಮ ಪಂಚಾಯತ್ ಸದಸ್ಯೆ ಲಲಿತಾ ಬಾಯಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸೂರಜ್ ಗೋವಿಂದ ರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.
ಆಸ್ತಿ ವಿವರ ನೀಡುವುದು ಸಂವಿಧಾನಿಕ ಕರ್ತವ್ಯ. ಸದ್ರಿ ಪ್ರಕರಣದಲ್ಲಿ ಅರ್ಜಿದಾರರು ಆಸ್ತಿ ವಿವರವನ್ನು ಸಲ್ಲಿಸಿಲ್ಲ. ಆದರೂ ಚುನಾವಣಾ ಆಯೋಗ ಅನರ್ಹತೆ ಆದೇಶವನ್ನು ನಿಗದಿತ ಅವಧಿ ಮುಗಿದ ನಂತರ 10 ತಿಂಗಳ ಬಳಿಕ ಹೊರಡಿಸಲಾಗಿದೆ.
ಈ ಪ್ರಕ್ರಿಯೆಯಲ್ಲೂ ಯಾವುದೇ ಲೋಪವಾಗಿಲ್ಲ. ಒಂದು ವೇಳೆ, ಸದಸ್ಯರು ನಿಯಮ ಪಾಲಿಸಿ ಅದರಲ್ಲಿ ಲೋಪವಾಗಿದ್ದರೆ ಕಾರಣ ಕೇಳಿ ನೋಟೀಸ್ ನೀಡಿ ತಕರಾರು ಎತ್ತಬಹುದಿತ್ತು ಎಂದು ಹೈಕೋರ್ಟ್ ನ್ಯಾಯಪೀಠ ಹೇಳಿದೆ.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 43b(1) ಪ್ರಕಾರ ಗ್ರಾಮ ಪಂಚಾಯತ್ ಸದಸ್ಯರು ತಾವು ಪಂಚಾಯತ್‌ಗೆ ಚುನಾಯಿತರಾದ ದಿನಾಂಕ ಅಥವಾ ಅಧಿಕಾರ ವಹಿಸಿಕೊಂಡ ಮೂರು ತಿಂಗಳಲ್ಲಿ ರಾಜ್ಯ ಚುನಾವಣಾ ಆಯೋಗ ನಿಗದಿಪಡಿಸಿರುವ ನಮೂನೆಯಲ್ಲಿ ಸಂಬಂಧಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೂಲಕ ಆಸ್ತಿ ವಿವರ ಸಲ್ಲಿಸಬೇಕು.