ಪತಿ ಆಕ್ಷೇಪಿಸಿಲ್ಲ ಎಂಬ ಕಾರಣಕ್ಕೆ ವಿಚ್ಚೇದನ ಅರ್ಜಿ ವಜಾ: ವಿಚಾರಣಾ ಕೋರ್ಟ್ ಆದೇಶ ಸರಿಯಿಲ್ಲ ಎಂದ ಹೈಕೋರ್ಟ್
ಪತಿ ಆಕ್ಷೇಪಿಸಿಲ್ಲ ಎಂಬ ಕಾರಣಕ್ಕೆ ವಿಚ್ಚೇದನ ಅರ್ಜಿ ವಜಾ: ವಿಚಾರಣಾ ಕೋರ್ಟ್ ಆದೇಶ ಸರಿಯಿಲ್ಲ ಎಂದ ಹೈಕೋರ್ಟ್ !
ವಿಚ್ಚೇದನ ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಗೆ ಪತಿ ಆಕ್ಷೇಪಣೆ ಸಲ್ಲಿಸಿಲ್ಲ ಎಂಬ ಕಾರಣ ನೀಡಿ ಅರ್ಜಿಯನ್ನು ವಜಾಗೊಳಿಸುವಂತಿಲ್ಲ ಎಂದು ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ.
ಹಿಂಸೆ ಆಧಾರದಲ್ಲಿ ವಿಚ್ಚೇದನ ಕೋರಿ ಪತ್ನಿ ಕೌಟುಂಬಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಆರ್ಜಿಯನ್ನು ಮೈಸೂರಿನ ಕೌಟುಂಬಿಕ ನ್ಯಾಯಾಲಯ ವಜಾಗೊಳಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಪತ್ನಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಮೇಲ್ಮನವಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾ. ಅಲೋಕ್ ಅರಾಧೆ ಮತ್ತು ನ್ಯಾ. ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಪತಿ ಹಾಜರಾಗಿದ್ದರು. ಆದರೆ, ಅವರು ಆಕ್ಷೇಪಣೆ ಸಲ್ಲಿಸಿಲ್ಲ. ಪತ್ನಿಯನ್ನು ಪಾಟೀ ಸವಾಲಿಗೆ ಒಳಪಡಿಸಿ ಆಕೆ ಒದಗಿಸಿರುವ ಸಾಕ್ಷ್ಯಾಧಾರಗಳನ್ನೂ ಪರೀಕ್ಷಿಸಿಲ್ಲ. ಹೀಗಿದ್ದರೂ ಪತ್ನಿಯ ಅರ್ಜಿಯನ್ನು ವಜಾಗೊಳಿಸಿರುವ ಕೌಟುಂಬಿಕ ನ್ಯಾಯಾಲಯ ಲೋಪ ಎಸಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಜೊತೆಗೆ ವಿಚ್ಚೇದನ ಅರ್ಜಿ ವಜಾಗೊಳಿಸಿ 2017 ರ ಮಾರ್ಚ್ 27ರ ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ್ದು, ದಂಪತಿ ವಿವಾಹವನ್ನು ಅನೂರ್ಜಿತಗೊಳಿಸಿ ಆದೇಶ ಹೊರಡಿಸಿದೆ.
ಪತ್ನಿ ತನ್ನ ಅರ್ಜಿ ಜೊತೆಗೆ ಸಲ್ಲಿಸಿರುವ ಸಾಕ್ಷ್ಯಗಳು ಪ್ರಶ್ನಿಸಲ್ಪಡದೆ ಹಾಗೆ ಉಳಿದಿವೆ. ಜೊತೆಗೆ ಹೈಕೋರ್ಟ್ ವಿಚಾರಣೆಗೆ ಪತಿ ಹಾಜರಾಗಿಲ್ಲ, ಪತ್ನಿಯ ಮೇಲ್ಮನವಿಯನ್ನು ವಿರೋಧಿಸಿಲ್ಲ ನ್ಯಾಯಾಲಯದ ಮುಂದಿರುವ ದಾಖಲೆ ಪರಿಶೀಲಿಸಿದರೆ, ಮೇಲ್ಮನವಿದಾರೆಯು ವಿಚ್ಚೇದನ ಪಡೆಯಲು ಅರ್ಹರಿದ್ದಾರೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
.