ಗ್ರಾಹಕರ ಕೋರ್ಟ್ ಜಡ್ಜ್‌ರಿಂದ ಜಾತಿ ನಿಂದನೆ ಕೇಸ್: FIR ರದ್ದುಗೊಳಿಸಿದ ಹೈಕೋರ್ಟ್
ಗ್ರಾಹಕರ ಕೋರ್ಟ್ ಜಡ್ಜ್‌ರಿಂದ ಜಾತಿ ನಿಂದನೆ ಕೇಸ್: FIR ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು ಜಿಲ್ಲಾ ಗ್ರಾಹಕ ನ್ಯಾಯಾಲಯದ ಸದಸ್ಯ (ಜಡ್ಜ್)ರಾದ ರೇಖಾ ಸಾಯಣ್ಣವರ್ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಜಾತಿ ನಿಂದನೆ ದೂರಿನ ಎಫ್‌ಐಆರ್‌ನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
ಪ್ರಕರಣದ ಆರೋಪಿಗಳು ಮತ್ತು ಅರ್ಜಿದಾರರಾದ ಜಗದೀಶ್ ಭತೀಜಾ ಮತ್ತು ಬೃಂದಾ ಭತೀಜಾ ಅವರ ಅರ್ಜಿಯನ್ನು ನ್ಯಾ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿ ಅರ್ಜಿದಾರರ ವಿರುದ್ಧದ ದೂರನ್ನು ವಜಾಗೊಳಿಸಿದೆ.
ರೇಖಾ ಸಾಯಣ್ಣವರ್ ಅವರು ಬೆಂಗಳೂರಿನ ಡಾಲರ್ಸ್ ಕಾಲನಿಯ ಪ್ರತಿಷ್ಠಿತ ಪೆಬೆಲೆ ಬೇ ಅಪಾರ್ಟ್‌ಮೆಂಟಿನಲ್ಲಿ ಐಷಾರಾಮಿ ಫ್ಲ್ಯಾಟ್‌ನಲ್ಲಿ ಬಾಡಿಗೆ ಪಡೆದುಕೊಂಡಿದ್ದರು. ಈ ಫ್ಲ್ಯಾಟ್‌ಗೆ ನಿಗದಿಪಡಿಸಿದ್ದ ಬಾಡಿಗೆಯನ್ನು ಪಾವತಿಸದೆ ಸುಮಾರು ರೂ. 15 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಬಾಕಿ ಇರಿಸಿದ್ದರು.
ಮನೆಯ ಮಾಲೀಕರಿಗೆ ನೀಡಲಾಗಿದ್ದ ಚೆಕ್‌ಗಳು ಅಮಾನ್ಯಗೊಂಡು ಬ್ಯಾಂಕಿನಿಂದ ಹಿಂತಿರುಗಿದ್ದವು. ಈ ಮಧ್ಯೆ, ಮನೆಯನ್ನು ಖಾಲಿ ಮಾಡಿಸಲು ಸಿವಿಲ್ ಕೋರ್ಟ್‌ನಿಂದ ಆದೇಶ ಪಡೆದ ಮಾರ್ಚ್ 29ರಂದು ಮನೆ ಖಾಲಿ ಮಾಡಿಸಿದ್ದರು.
ಇದೇ ವೇಳೆ, ರೇಖಾ ಸಾಯಣ್ಣವರ್ ಮಾರ್ಚ್ 26ರಂದು ಮನೆಗೆ ಬಂದಿದ್ದ ಮಾಲೀಕರು ನನ್ನ ಜಾತಿ ನಿಂದನೆ ಮಾಡಿದ್ದರು ಎಂದು ದೂರು ನೀಡಿದ್ದರು. ಈ ದೂರನ್ನು ಆಧರಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿತ್ತು.
ಎಫ್‌ಐಆರ್ ರದ್ದುಪಡಿಸಲು ಕಾರಣವೇನು...?
ಎಸ್‌ಸಿ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಕಲಂ 3(1)(ಆರ್) ಪ್ರಕಾರ ಆರೋಪಿಸಲಾದ ಘಟನೆ ಸಾರ್ವಜನಿಕ ಪ್ರದೇಶದಲ್ಲಿ ನಡೆದಿರಬೇಕು. ಆದರೆ, ಸದ್ರಿ ಪ್ರಕರಣದಲ್ಲಿ ದೂರುದಾರರ ಪ್ರಕಾರ ಈ ಘಟನೆ ಮನೆಯ ಒಳಗೆ ನಡೆದಿದೆ ಎಂದು ತಿಳಿಸಿರುತ್ತಾರೆ.
ಮೂರು ದಿನಗಳು ಕಳೆದ ನಂತರ ದೂರು ನೀಡಲಾಗಿದೆ. ಜಿಲ್ಲಾ ಗ್ರಾಹಕ ನ್ಯಾಯಾಲಯದ ಸದಸ್ಯೆಯಾದ ದೂರುದಾರರು ತಮ್ಮ ಹಕ್ಕುಗಳ ಬಗ್ಗೆ ಸಂಪೂರ್ಣ ಅರಿವು ಇರಬೇಕು. ಎಲ್ಲವನ್ನೂ ತಿಳಿದಿರುವ ದೂರುದಾರರು ದೂರು ನೀಡಲು ಇಷ್ಟು ತಡ ಮಾಡುವ ಅಗತ್ಯವಿರಲಿಲ್ಲ ಎಂದು ಹೈಕೋರ್ಟ್ ನ್ಯಾಯಪೀಠ ಅಭಿಪ್ರಾಯಪಟ್ಟಿತು.