ಹೈಕೋರ್ಟ್ ತೀರ್ಪುಗಳಿಗೆ ತಟಸ್ಥ ಉಲ್ಲೇಖ ವ್ಯವಸ್ಥೆ: ಎಲ್ಲರಿಗೂ ಸುಲಭವಾಗಿ ಪ್ರತಿ ಉಚಿತವಾಗಿ ಲಭ್ಯ
ಹೈಕೋರ್ಟ್ ತೀರ್ಪುಗಳಿಗೆ ತಟಸ್ಥ ಉಲ್ಲೇಖ ವ್ಯವಸ್ಥೆ: ಎಲ್ಲರಿಗೂ ಸುಲಭವಾಗಿ ಪ್ರತಿ ಉಚಿತವಾಗಿ ಲಭ್ಯ
ಹೈಕೋರ್ಟ್ ತೀರ್ಪುಗಳು ಉಚಿತವಾಗಿ ಯಾವುದೇ ಷರತ್ತಿಲ್ಲದೆ ಸುಲಭವಾಗಿ ಸಿಗುವಂತಾಗಬೇಕು. ಈ ದಿಸೆಯಲ್ಲಿ ಕರ್ನಾಟಕ ಹೈಕೋರ್ಟ್ ತನ್ನ ಅಧಿಕೃತ ಜಾಲತಾಣದಲ್ಲಿ ಒದಗಿಸಿರುವ ಎಲ್ಲ ತೀರ್ಪುಗಳಿಗೆ ತಟಸ್ಥ ಉಲ್ಲೇಖ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ನ್ಯಾಯಾಲಯದ ತೀರ್ಪುಗಳನ್ನು ಪಡೆಯಲು ಯಾವುದೇ ಚಂದಾದಾರಿಕೆ ಇಲ್ಲ. ಅದೇ ರೀತಿ ಯಾವುದೇ ರೀತಿಯ ಷರತ್ತುಗಳೂ ಇಲ್ಲ. ಇದು ಎಲ್ಲರಿಗೂ ಸುಲಭವಾಗಿ ಹಾಗೂ ಉಚಿತವಾಗಿ ದೊರೆಯಲಿದೆ ಎಂಬುದನ್ನು ಹೈಕೋರ್ಟ್ ದೃಢಪಡಿಸಿದೆ.
ಈ ಉಪಕ್ರಮವು, ವಕೀಲರು, ಸರ್ಕಾರಿ ಇಲಾಖೆಗಳು, ದಾವೆದಾರರು ಹಾಗೂ ಕಾನೂನು ವಿದ್ಯಾರ್ಥಿಗಳಿಗೆ ಉಪಯೋಗಿಯಾಗಿರುತ್ತದೆ. ಅಂತರ್ಜಾಲದಲ್ಲಿ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಅವುಗಳನ್ನು ಸುಲಭವಾಗಿ ಪಡೆಯಬಹುದಾಗಿದೆ.
ಹೈಕೋರ್ಟ್ ಅಧಿಕೃತ ಜಾಲತಾಣದಲ್ಲಿ ಎಲ್ಲ ತೀರ್ಪುಗಳು ವಾಟರ್ ಮಾರ್ಕ್ ಇಲ್ಲದೆ ಲಭ್ಯವಿದೆ. ಇದಕ್ಕೆ ಡಿಜಿಟಲ್ ಸಹಿಯ ದೃಢೀಕರಣ ಪರಿಶೀಲಿಸಲು ಕ್ಯೂ-ಆರ್ ಕೋಡ್‌ನಂತ ಅತ್ಯಾಧುನಿಕ ವ್ಯವಸ್ಥೆಗಳನ್ನೂ ಅಳವಡಿಸಲಾಗಿದೆ ಎಂದು ಹೈಕೋರ್ಟ್ ರಿಜಿಸ್ಟ್ರಿ ತಿಳಿಸಿದೆ.
ದೇಶದ ಎಲ್ಲ ಹೈಕೋರ್ಟ್ ಮತ್ತು ಸುಪ್ರೀಂ ನ್ಯಾಯಪೀಠಗಳು ನೀಡುವ ತೀರ್ಪುಗಳಿಗೆ ಒಂದೇ ರೀತಿಯ ವಿಶಿಷ್ಟವಾದ ಉಲ್ಲೇಖ ಸಂಖ್ಯೆ ನೀಡುವ ಬಗ್ಗೆ ಅಧ್ಯಯನ ನಡೆಸಲು ಹೈಕೋರ್ಟ್ ನ್ಯಾಯಮೂರ್ತಿಗಳು ತ್ರಿ ಸದಸ್ಯ ಸಮಿತಿಯನ್ನು ರಚಿಸಿತ್ತು.
ಸದ್ಯ ಸುಪ್ರೀಂ ಕೋರ್ಟ್, ದೆಹಲಿ,ಕೇರಳ, ಮದ್ರಾಸ್ ಮತ್ತು ಬಾಂಬೆ ಹೈಕೋರ್ಟ್‌ಗಳು ತನ್ನ ಎಲ್ಲ ತೀರ್ಪುಗಳಿಗೆ ವಿಶೇಷ ತಟಸ್ಥ ಉಲ್ಲೇಖ ಸಂಖ್ಯೆಗಳನ್ನು ನೀಡುತ್ತಿವೆ.