ವಕೀಲ ಇಂಟರ್ನಿ ಅತ್ಯಾಚಾರ ಪ್ರಕರಣ: ವಕೀಲನ ವಿರುದ್ಧದ FIR ರದ್ದು ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ವಕೀಲ ಇಂಟರ್ನಿ ಅತ್ಯಾಚಾರ ಪ್ರಕರಣ: ವಕೀಲನ ವಿರುದ್ಧದ FIR ರದ್ದು ಅರ್ಜಿ ತಿರಸ್ಕರಿಸಿದ ಹೈಕೋರ್ಟ್
ಮಂಗಳೂರು ವಕೀಲರೊಬ್ಬರ ಕಚೇರಿಯಲ್ಲಿ ವಕೀಲ ವೃತ್ತಿಯ ತರಬೇತಿಗಾಗಿ ಆಗಮಿಸಿದ್ದ (ಇಂಟರ್ನಿ) ಕಾನೂನು ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಂಗಳೂರಿನ ವಕೀಲರೊಬ್ಬರ ವಿರುದ್ಧ ದಾಖಲಾದ ಪ್ರಥಮ ಮಾಹಿತಿ ವರದಿ(FIR)ಯನ್ನು ರದ್ದುಪಡಿಸಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ತಿರಸ್ಕರಿಸಿದೆ.
ಮಂಗಳೂರಿನ ವಕೀಲರಾದ ಕೆ.ಎಸ್.ಎನ್. ರಾಜೇಶ್ ಅವರು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ಧ ಏಕಸದಸ್ಯ ಪೀಠ ಈ ಮಹತ್ವದ ಆದೇಶ ಹೊರಡಿಸಿದೆ.
ಒಬ್ಬ ಕಾನೂನು ವಿದ್ಯಾರ್ಥಿ ಇಂಟರ್ನಿಯಾಗಿ ವಕೀಲ ಕಚೇರಿಗೆ ಪ್ರವೇಶಿಸಿದಾಗ ಎಂತಹ ಪರಿಸ್ಥಿತಿಯನ್ನು ಎದುರಿಸಬೇಕಾದೀತು ಎಂಬ ಊಹೆಯೇ ಮೈಯಲ್ಲಿ ನಡುಕ ಹುಟ್ಟಿಸುವಂತಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಈ ಪ್ರಕರಣದ ದೂರುದಾರರಾದ ಇಂಟರ್ನಿ ಕಾನೂನು ವಿದ್ಯಾರ್ಥಿನಿಯು ವಕೀಲರ ವಿರುದ್ಧ ದೂರು ದಾಖಲಿಸಿದ್ದಾರೆ. ಈ ದೂರಿನ ಪ್ರಕಾರ, ಕಾನೂನು ವಿದ್ಯಾರ್ಥಿಯು ವಕೀಲರ ಮಂಗಳೂರು ಕಚೇರಿಯಲ್ಲಿ ಇಂಟರ್ನ್ ಆಗಿ ಸೇರಿಕೊಂಡರು. ಮತ್ತು ಆ ಕರಾಳ ದಿನದ ಸಂಜೆ, ವಕೀಲರ ಕಚೇರಿಯಲ್ಲಿ ವಕೀಲರು ಮತ್ತು ಇಂಟರ್ನಿ ಇಬ್ಬರೇ ಇದ್ದರು. ವಕೀಲರು ಕಾನೂನು ವಿದ್ಯಾರ್ಥಿನಿಯನ್ನು ತನ್ನ ಕ್ಯಾಬಿನ್‌ಗೆ ಕರೆದು "ಭಯಾನಕ" ಕೃತ್ಯಗಳನ್ನು ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಬಳಿ ಕರೆ ರೆಕಾರ್ಡಿಂಗ್ ಕೂಡ ಇದೆ ಎಂಬುದನ್ನು ದೂರುದಾರರು ಹೇಳಿಕೊಂಡಿದ್ದಾರೆ. ಅದರಲ್ಲಿ ಅರ್ಜಿದಾರರಾದ ವಕೀಲರು ಇಂಟರ್ನಿಯಾದ ತನ್ನ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದ್ದಾರೆ ಎಂದು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ.
ದೂರನ್ನು ಆಧರಿಸಿ ಪೊಲೀಸರು ಭಾರತೀಯ ದಂಡ ಸಂಹಿತೆಯ ಕಲಂ 376, 376(2)(ಎಫ್), 376(2)(ಕೆ), 376ಸಿ, 511, 354ಎ, 354ಬಿ, 354ಸಿ, 354ಡಿ, 506, 34, 384, 388 ಮತ್ತು 389ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
12ಕ್ಕೂ ಹೆಚ್ಚು ಬ್ಯಾಂಕ್‌ಗಳ ಪ್ಯಾನೆಲ್ ವಕೀಲರಾಗಿದ್ದ ಕೆ.ಎಸ್.ಎನ್. ರಾಜೇಶ್ ಲೋಕಾಯುಕ್ತ, ಎಸಿಬಿ ಪರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿಯೂ ಸೇವೆ ಸಲ್ಲಿಸುತ್ತಿದ್ದರು. ಪ್ರಕರಣ ದಾಖಲಾಗುತ್ತಿದ್ದಂತೆ, ಆರೋಪಿ ವಕೀಲರು ಹಲವಾರು ದಿನಗಳ ವರೆಗೆ ಪೊಲೀಸರಿಗೆ ಸಿಗದೆ ನಾಪತ್ತೆಯಾಗಿದ್ದರು.