ಭೂ ಪರಿವರ್ತನೆ ಇನ್ನು ಸರಳ: ಹೊಸ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆಗಳು..?
ಭೂ ಪರಿವರ್ತನೆ ಇನ್ನು ಸರಳ: ಹೊಸ ವ್ಯವಸ್ಥೆಯಲ್ಲಿ ಏನೆಲ್ಲ ಬದಲಾವಣೆಗಳು..?
ಮಾಸ್ಟರ್ ಪ್ಲ್ಯಾನ್ ಹೊಂದಿರುವ ನಗರಗಳಲ್ಲಿ ಭೂ ಪರಿವರ್ತನೆಯ ಪ್ರಕ್ರಿಯೆಯನ್ನು ಸರಳಗೊಳಿಸಲು ಕಂದಾಯ ಇಲಾಖೆ ನಿರ್ಧರಿಸಿದೆ. ಈಗ ಇರುವ ಪ್ರಕ್ರಿಯೆಯಲ್ಲಿ ಕಚೇರಿಯಿಂದ ಕಚೇರಿಗೆ, ಟೇಬಲ್‌ನಿಂದ ಟೇಬಲ್‌ಗೆ ಅಲೆಯುವ ಪದ್ಧತಿಯನ್ನು ರದ್ದುಪಡಿಸಿ ನೇರವಾಗಿ ಅರ್ಜಿದಾರನಿಗೆ ಭೂ ಪರಿವರ್ತನೆ ಮಾಡಲು ನಿರ್ಧರಿಸಲಾಗಿದೆ.
ಇದರಿಂದ ಮಧ್ಯವರ್ತಿಗಳ ಪಾಲ್ಗೊಳ್ಳುವಿಕೆಗೆ ಕಡಿವಾಣ ಹಾಕುವುದು ಮತ್ತು ಭ್ರಷ್ಟಾಚಾರವನ್ನು ನಿಯಂತ್ರಿಸಬಹುದಾಗಿದೆ ಎಂದು ಕಂದಾಯ ಇಲಾಖೆ ಹೇಳಿದೆ.
ಬಹುತೇಕ ನಗರಗಳಲ್ಲಿ ಅಭಿವೃದ್ಧಿಗಾಗಿ ಹತ್ತಿಪ್ಪತ್ತು ವರ್ಷಗಳಿಗೆ ಮಾಸ್ಟರ್ ಪ್ಲ್ಯಾನ್ ಸಿದ್ದಪಡಿಸಲಾಗುತ್ತದೆ. ರಸ್ತೆ, ಹೊರ ವರ್ತುಲ ರಸ್ತೆ, ಸೇತುವೆ, ವಸತಿ, ಕೈಗಾರಿಕೆ, ಸಮುಚ್ಚಯ ಸೇರಿದಂತೆ ಯಾವ ಪ್ರದೇಶಗಳಲ್ಲಿ ಏನು ಇರಬೇಕು ಎಂಬ ಸ್ಪಷ್ಟ ಮಾಹಿತಿ ಯೋಚನೆ ಈ ಮಾಸ್ಟರ್ ಪ್ಲ್ಯಾನ್‌ನಲ್ಲಿ ಇರುತ್ತದೆ.
ಹೀಗಿದ್ದರೂ, ವಾಣಿಜ್ಯ ಮತ್ತು ವಸತಿ ಉದ್ದೇಶಗಳಿಗೆ ಭೂ ಪರಿವರ್ತನೆ ಮಾಡಿಕೊಳ್ಳಲು ಜನರು ಕಚೇರಿಯಿಂದ ಕಚೇರಿಗೆ ಅಲೆಯುತ್ತಾರೆ. ಈ ವ್ಯವಸ್ಥೆ ಬದಲಾಗಬೇಕು. ನಿರ್ಧರಿತ ಸಮಯದಲ್ಲಿ ಜನರಿಗೆ ಭೂ ಪರಿವರ್ತನೆಯ ಆದೇಶ ಸಿಗಬೇಕು. ಇದಕ್ಕಾಗಿ ಭೂ ಪರಿವರ್ತನೆಯ ಪ್ರಕ್ರಿಯೆಯನ್ನು ಸರಳಗೊಳಿಸಲಾಗುತ್ತದೆ.
ಡಿಸಿ ಅಧಿಕಾರ ಮೊಟಕು?
ಜಿಲ್ಲಾಧಿಕಾರಿಗಳಿಗೆ ಈಗ ಇರುವ ಭೂಪರಿವರ್ತನೆಯ ಅಧಿಕಾರವನ್ನು ಮೊಟಕುಗೊಳಿಸುವ ಚಿಂತನೆಯೂ ನಡೆದಿದೆ. ಇದರಿಂದ ಜನರಿಗೆ ಅನುಕೂಲವಾಗುತ್ತದೆ ಎಂಬುದು ಕಂದಾಯ ಇಲಾಖೆಯ ಅಭಿಪ್ರಾಯ.
ಕಳೆದ ಸರ್ಕಾರದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆಗೆ ತಿದ್ದುಪಡಿ ತಂದು ಏಳು ದಿನಗಳಲ್ಲಿ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕೆ ಪರಿವರ್ತಿಸಲು ಅವಕಾಶ ನೀಡಲಾಗಿತ್ತು. ಆದರೂ, ಭೂ ಪರಿವರ್ತನೆಯ ಪ್ರಕ್ರಿಯೆಯಲ್ಲಿ ಸಾಕಷ್ಟು ತೊಡಕುಗಳು ಉಳಿದುಕೊಂಡಿವೆ. ಈ ಎಲ್ಲ ತೊಡಕುಗಳನ್ನು ನಿವಾರಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ತಿಳಿಸಿದ್ಧಾರೆ.
.